ಸಕ್ಕರೆ ನಾಡು ಎಂದು ಕರೆಯಲ್ಪಡುವ ನಮ್ಮ ಮಂಡ್ಯ ಜಿಲ್ಲೆಯು ಡಿಸೆಂಬರ್ 20 ರಿಂದ 22ರ ವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿದೆ. ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ, ಕನ್ನಡವನ್ನು ಕಟ್ಟುವ ಇಂತಹ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸುವುದು ಗೌರವದ ಜೊತೆ ಜವಾಬ್ದಾರಿಯೂ ಹೌದು. ಮಂಡ್ಯ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕೇಂದ್ರವಾಗಿ ತನ್ನ ವಿಶಿಷ್ಟ ಗುರುತನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ.
ಕನ್ನಡ ಸಾಹಿತ್ಯವು ನಮ್ಮ ಮಂಡ್ಯದ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಬೇಸಾಯವನ್ನೇ ನಂಬಿ ಬದುಕುತ್ತಿರುವ ಇಲ್ಲಿನ ರೈತರ ಹೊಲಗಳಲ್ಲಿ ಹಲವಾರು ಜನಪದ ಗೀತೆಗಳು ಹುಟ್ಟಿಕೊಂಡಿವೆ. ಜೀವನದಿ ಕಾವೇರಿಯ ತಟದಲ್ಲಿ ಕುಳಿತ ಕವಿಯ ಮನದಲ್ಲಿ ಅದೆಷ್ಟೋ ಕವಿತೆಗಳು ಜನ್ಮತಾಳಿವೆ. ಇಲ್ಲಿನ ಪ್ರತಿಯೊಂದು ಹಳ್ಳಿಯೂ ಈ ಕನ್ನಡ ಮಣ್ಣಿನ ಬಗ್ಗೆ ಒಂದೊಂದು ಕಥೆ ಹೇಳುತ್ತವೆ.
‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್” ಎಂದು ಶ್ರೀವಿಜಯನು ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಕನ್ನಡ ನಾಡಿನ ಜನರು ಸಾಹಿತ್ಯ ರಚನೆಯಲ್ಲಿ ನಿಜವಾಗಿಯೂ ಚತುರರಾಗಿದ್ದಾರೆ. ಇತಿಹಾಸವನ್ನು ನೋಡಿದರೆ ಸಾಹಿತ್ಯ ಕೇವಲ ಅಧ್ಯಯನ ಮಾಡಿರುವವರಿಗೆ ಸೀಮಿತವಾಗಿರಲಿಲ್ಲ. ರೊಟ್ಟಿ ಬಡಿಯುವಾಗ, ಎತ್ತಿನ ಬಂಡಿ ಹೊಡೆಯುವಾಗ, ಮೀನಿಗಾಗಿ ಬಲೆ ಬೀಸುವಾಗ, ರಾಗಿ ಬೀಸುವಾಗ, ಹೊಲ ಗದ್ದೆಗಳಲ್ಲಿ ದುಡಿಯುವಾಗ ಜನಿಸಿದ ಜನಪದ ಗೀತೆಗಳು ಇಂದಿಗೂ ಪ್ರಚಲಿತದಲ್ಲಿವೆ.
ಪಂಪ, ರನ್ನ, ಪೊನ್ನರಿಂದ ಹಿಡಿದು ಬಸವಣ್ಣನವರು, ಕನಕ ದಾಸರು, ಪುರಂದರ ದಾಸರಂತಹ ಪೂರ್ವಜರ ಸಾಹಿತ್ಯಗಳು ಅವರ ಕಾಲಾವಧಿಯ ಜೀವನಾನುಭವದ ಸಾರವನ್ನು ಹೊಂದಿದ್ದವು. ಇಂತಹ ಸಾಹಿತ್ಯಗಳನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎನ್ನುವ ಆಶಯದೊಂದಿಗೆ ಅವನ್ನು ಗ್ರಂಥ ರೂಪಕ್ಕೆ ಇಳಿಸಲು ಹಲವಾರು ಸಾಹಿತಿಗಳು ಶ್ರಮಿಸಿದ್ದಾರೆ. ಶತಮಾನಗಳಷ್ಟು ಹಳೆಯ ಸಾಹಿತ್ಯದ ಮೌಲ್ಯಗಳನ್ನು ಇಂದಿನ ದಿನಗಳಲ್ಲಿಯೂ ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಬಸವಣ್ಣನವರ ಅನುಭವ ಮಂಟಪವನ್ನು ನಾವಿಂದು ಸಂಸತ್ತಿನ ರೂಪದಲ್ಲಿ ನೋಡುತ್ತಿದ್ದೇವೆ. ನಮ್ಮ ಆಚಾರ ವಿಚಾರ, ರೂಢಿ, ಸಂಪ್ರದಾಯ, ಬದುಕಿನ ಶೈಲಿ ಆಹಾರ ಪದ್ದತಿ ಇವೆಲ್ಲವೂ ಸಾಹಿತ್ಯದ ಅವಿಭಾಜ್ಯ ಅಂಗವಾಗಿವೆ.
ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತಿಗಳು, ಸಾಹಿತ್ಯವನ್ನು ಓದುವ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರಿಗೆ ಮಾತ್ರ ಸೀಮಿತವಾಗಿಲ್ಲ. ನಾಡಿನ ಪ್ರತಿಯೊಬ್ಬ ಜನಸಾಮಾನ್ಯರೂ ಈ ಹಬ್ಬದಲ್ಲಿ ಪಾಲ್ಗೊಳ್ಳಬೇಕು, ದೇಶ ವಿದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರೂ ಈ ಸಂಭ್ರಮವನ್ನು ಕಣ್ಣುಂಬಿಕೊಳ್ಳಬೇಕು ಎನ್ನುವುದು ನಮ್ಮ ಆಶಯ.
ನಮ್ಮ ಜಿಲ್ಲೆಗೆ ಸಾವಿರಾರು ಕನ್ನಡಾಭಿಮಾನಿಗಳು, ಲೇಖಕರು, ಕವಿಗಳು ಮತ್ತು ವಿದ್ವಾಂಸರನ್ನು ಸ್ವಾಗತಿಸುವ ಜೊತೆ ಈ ಕಾರ್ಯಕ್ರಮದ ಮಹತ್ವ ಮತ್ತು ಕನ್ನಡ ಸಾಹಿತ್ಯದ ಪರಂಪರೆಯನ್ನು ಪೋಷಿಸುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡದ ಉಳಿವು ಬೆಳವಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಬಂದಿದೆ. ಇದೇ ಆಶಯದೊಂದಿಗೆ ಹೆಚ್.ವಿ ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಕನ್ನಡಕ್ಕಾಗಿ ದುಡಿದ ಅನೇಕ ಸಾಧಕರ ಅಧ್ಯಕ್ಷತೆಯಲ್ಲಿ ಈವರೆಗೆ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ 87ನೇ ಸಾಹಿತ್ಯ ಸಂಭ್ರಮಕ್ಕೆ ಅಡಿಯಿಟ್ಟಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ನಮ್ಮ ಮಂಡ್ಯದಲ್ಲಿ ಜರುಗುತ್ತಿರುವುದು ಖುಷಿಯ ವಿಚಾರ. ಮಂಡ್ಯದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು 1974ರಲ್ಲಿ. ಡಿ. ದೇವರಾಜ್ ಅರಸ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೈಸೂರು ರಾಜ್ಯ ಮರುನಾಮಕರಣಗೊಂಡು ಕರ್ನಾಟಕವಾದ ಮರು ವರ್ಷವೇ ಜಿಲ್ಲೆಯಲ್ಲಿ ಕನ್ನಡ ಹಬ್ಬ ನಡೆದಿದ್ದು ಹಾಗೂ ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿ ನಾಯಕಿಯಾಗಿದ್ದ ಜಯದೇವಿತಾಯಿ ಲಿಗಾಡೆ ಅವರು ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ವಿಶೇಷವಾಗಿತ್ತು. ಬಳಿಕ 1994ರಲ್ಲಿ 2ನೇ ಬಾರಿ ನಮ್ಮ ಮಂಡ್ಯದಲ್ಲಿ 63ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು, ಅದರ ಅಧ್ಯಕ್ಷತೆ ವಹಿಸಿದ್ದವರು ಸಾಹಿತಿ ಚದುರಂಗ ಅವರು. ಆ ಸಂದರ್ಭದಲ್ಲಿ ನಾನು ಮಂಡ್ಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಶ್ರೀ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿತ್ತು. ಅದಾದ ಮೂರು ದಶಕಗಳ ಬಳಿಕ ಇದೀಗ ಮತ್ತೊಮ್ಮೆ ನಮ್ಮ ಮಂಡ್ಯದಲ್ಲಿ ಕನ್ನಡ ಹಬ್ಬ ಜರುಗುತ್ತಿದೆ. ಜಾನಪದ ಲೋಕದಲ್ಲಿ ವಿಶೇಷ ಸಾಧನೆಗೈದಿರುವ ಶ್ರೀ ಗೊ.ರು. ಚನ್ನಬಸಪ್ಪ ಅವರು ಈ ಸಾಲಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಇತ್ತೀಚೆಗಷ್ಟೇ ಈ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶುಭ ಕೋರಿ ಎಸ್ಎಂಕೆ ಅವರು ಪತ್ರ ಬರೆದಿದ್ದರು. ಅವರ ಅನುಪಸ್ಥಿತಿಯ ನಡುವೆ ಅವರಲ್ಲಿದ್ದ ಸಾಹಿತ್ಯಾಭಿಮಾನ ಹಾಗೂ ನಮ್ಮ ಮಂಡ್ಯ, ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎಸ್ಎಂಕೆ ಅವರ ಗೌರವಾರ್ಥವಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಅವರ ಹೆಸರಿಡಲಾಗಿದೆ.
ಕನ್ನಡ ಸಾಹಿತ್ಯದೊಂದಿಗೆ ಮಂಡ್ಯದ ಸಂಬಂಧವು ಭಾಷೆಯಷ್ಟೇ ಹಳೆಯದು. ಇದು ಕನ್ನಡಕ್ಕೆ ಅಮೂಲ್ಯ ಕೊಡುಗೆ ನೀಡಿದ ಹಲವಾರು ಪ್ರಸಿದ್ಧ ಕವಿಗಳು, ಬರಹಗಾರರು ಮತ್ತು ಚಿಂತಕರ ಜನ್ಮಸ್ಥಳವಾಗಿದೆ. ಶ್ರೀ ಪೀಟಿಲು ಚೌಡಯ್ಯ ಅವರು, ಬಿಎಂ ಶ್ರೀಕಂಠಯ್ಯ, ಪು.ತಿ. ನರಸಿಂಹಾಚಾರ್, ಕೆ.ಎಸ್. ನರಸಿಂಹಸ್ವಾಮಿ ಸಹಿತ ಅನೇಕ ಮಹನೀಯರು ಜನಿಸಿದ ಈ • ಭೂಮಿಯಲ್ಲಿ ಇಂದು ಸಾಹಿತ್ಯ ಸಂಭ್ರಮ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.
ಸಾಹಿತ್ಯ ಸಮ್ಮೇಳನ ನಡೆಯಲಿರುವ ಮೂರು ದಿನಗಳ ಕಾಲ ಮಂಡ್ಯ ಕನ್ನಡಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಲು ಅಕ್ಷರ ಶಃ ಸಜ್ಜಾಗಿದೆ. ಯಾರೊಬ್ಬರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದ ಸುತ್ತ ಮುತ್ತಲಿನ ಜಿಲ್ಲೆಗಳು ಹಾಗೂ ಬೆಂಗಳೂರಿನಿಂದ ಆಗಮಿಸಲಿರುವ ಸಾಹಿತ್ಯಾಭಿಮಾನಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಪಾರ್ಕಿಂಗ್ ಸೌಲಭ್ಯದ ಜೊತೆ ಆಗಮಿಸುವ ಎಲ್ಲರಿಗೂ ಊಟ – ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೈಸೂರು ದಸರಾ ಸಂದರ್ಭದಲ್ಲಿ ಕಾಣಬಹುದಾದ ದೀಪಾಲಂಕಾರವನ್ನು ನಮ್ಮ ಮಂಡ್ಯದಲ್ಲಿಯೂ ನೋಡಬಹುದಾಗಿದೆ. ಹಾಗೆಯೇ, ಮೈಸೂರು ದಸರಾ ಹೊರತುಪಡಿಸಿ ಇದೇ ಮೊದಲಬಾರಿಗೆ ಪೊಲೀಸ್ ಬ್ಯಾಂಡ್ ನಮ್ಮ ಮಂಡ್ಯದಲ್ಲಿ ಪ್ರದರ್ಶನ ನೀಡಲಿದೆ.
ಸಾಹಿತ್ಯ ಸಮ್ಮೇಳನ ಪ್ರತಿಯೊಬ್ಬ ಕನ್ನಡಿಗರ ಹಬ್ಬ. ಈ ಹಬ್ಬಕ್ಕೆ ರಾಜ್ಯ-ಹೊರ ರಾಜ್ಯ ಹಾಗೂ ಹೊರದೇಶದಲ್ಲಿರುವ ಕನ್ನಡಿಗರು ಭಾಗವಹಿಸಬೇಕೆಂದು ಆಹ್ವಾನ ನೀಡಲಾಗಿದೆ. ಇದಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಕನ್ನಡ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಸಮ್ಮೇಳನಕ್ಕೆ ಎಲ್ಲರನ್ನೂ ಆಹ್ವಾನಿಸಿ ಬಂದಿದೆ. ಸಮ್ಮೇಳನದ ಯಶಸ್ಸಿಗಾಗಿ 28 ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲವೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ನಿರಂತರ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬ ಶಾಸಕರು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕನ್ನಡದ ಕೆಲಸಕ್ಕೆ ಒಮ್ಮನಸ್ಸಿನಿಂದ ಕೈಜೋಡಿಸಿದ್ದಾರೆ.
ಇದೇ ಶುಕ್ರವಾರ, ಡಿಸೆಂಬರ್ 20 ರಿಂದ 23ರ ವರೆಗೆ ಪ್ರತಿನಿತ್ಯ ಸಂಜೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳು, ನೃತ್ಯ ಹಾಗೂ ಕಲೆಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ವಿಶೇಷವಾಗಿ ಈ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಸರ್ಕಾರ ಅಥವಾ ಸಾಹಿತ್ಯ ಪರಿಷತ್ತಿನ ಹಣವನ್ನು ವಿನಿಯೋಗಿಸದೇ, ವಿವಿಧ ದಾನಿಗಳ ನೆರವನ್ನು ಪಡೆಯಲಾಗಿದೆ.
ಕನ್ನಡ ಭಾಷೆ ಹಾಗೂ ಸಾಹಿತ್ಯದ ಕೆಲಸ ಅತ್ಯಂತ ಜವಾಬ್ದಾರಿಯುತವಾದದ್ದು. ಇಂತಹ ಒಂದು ಪ್ರಮುಖ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡಿರುವ ನನಗೆ ರಾಜಕಾರಣವನ್ನು ಬದಿಗಿಟ್ಟು, ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಕನ್ನಡದ ವಿಚಾರ ಬಂದಾಗ ಮಂಡ್ಯದ ಜನತೆ ಎಂದಿಗೂ ಮುಂದಿರುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ನಾವೆಲ್ಲ ಕನ್ನಡಮ್ಮನ ಮಕ್ಕಳು ಎನ್ನುವ ಧೈಯದೊಂದಿಗೆ ಕೆಲಸ ಮಾಡುತ್ತಿದ್ದೇವೆ.
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ.” ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿರುವ ನುಡಿ ಇಲ್ಲಿ ಅಕ್ಷರ ಶಃ ಪಾಲನೆಯಾಗತ್ತಿದೆ.
ಈ ನೆಲ ಇರುವವರೆಗೂ ಕನ್ನಡ ಸಾಹಿತ್ಯ ಜೀವಂತವಾಗಿರಬೇಕು, ನಮ್ಮ ಮುಂದಿನ ಪೀಳಿಗೆಗಳು ನಮಗಿಂತ ಅದ್ದೂರಿಯಾಗಿ ಸಾಹಿತ್ಯ ಸಂಭ್ರಮವನ್ನು ಆಚರಿಸುವಂತಾಗಬೇಕು. ಇದಕ್ಕೆಲ್ಲ ಮಾದರಿ ಹೆಜ್ಜೆ ಎನ್ನುವಂತೆ ನಮ್ಮ ಮಂಡ್ಯ ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ.
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಧೈಯದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ. ಬನ್ನಿ, ನಮ್ಮೆಲ್ಲರ ಕನ್ನಡ ಹಬ್ಬವನ್ನು ಸಂಭ್ರಮಿಸೋಣ.
ಜೈ ಭುವನೇಶ್ವರಿ, ಜೈ ಕರ್ನಾಟಕ!
ಲೇಖನ-ಎನ್.ಚಲುವರಾಯಸ್ವಾಮಿ
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು
ಕರ್ನಾಟಕ ಸರ್ಕಾರ