Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • ಸಿನೆಮಾ
    Facebook X (Twitter) Instagram
    Sanjedarshan
    Home»ಇದೀಗ ಬಂದ ಸುದ್ದಿ»ವಿಶ್ವಗುರುವಿಗೆ ದೇಶದ ಸಮಸ್ಯೆ ಕಾಣುತ್ತಿಲ್ಲವೇ ? – ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಾಗ್ದಾಳಿ
    ಇದೀಗ ಬಂದ ಸುದ್ದಿ

    ವಿಶ್ವಗುರುವಿಗೆ ದೇಶದ ಸಮಸ್ಯೆ ಕಾಣುತ್ತಿಲ್ಲವೇ ? – ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಾಗ್ದಾಳಿ

    SanjeBy SanjeApril 28, 20243 Mins Read

    ಬಾಗಲಕೋಟೆ: ಭಾರತ ವಿಶ್ವಗುರು ಆಗಲಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ ದೇಶದ ರೈತರ ಬದುಕು ಹಸನಾಗದೆ, ಮಹಿಳೆಯರು ಸ್ವಾವಲಂಬಿಗಳಾಗದೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗದೆ, ದೇಶ ಆರ್ಥಿಕವಾಗಿ ಸಧೃಡವಾಗದೆ ಭಾರತ ಹೇಗೆ ವಿಶ್ವ ಗುರು ಆಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪ್ರಶ್ನೆ ಮಾಡಿದರು.

    ಬೀಳಗಿ ವಿಧಾನಸಭಾ ಕ್ಷೇತ್ರದ ಹಲವೆಡೆ ಭಾನುವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು,ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಯುವಕರು ಉದ್ಯೋಗವಿಲ್ಲದೆ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹಲವಾರು ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ವಿಶ್ವ ಗುರುವಿನ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡಬೇಕು ಎಂದರು.

    ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾಯಿತು. ನೆರೆ ಬಂದಾಗ, ಬರ ಬಿದ್ದಾಗ ನಿಮ್ಮ ಕಷ್ಟ ಕೇಳಲು ಕರ್ನಾಟಕಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ ಅವರು ಮತ ಕೇಳಲು ಪದೇಪದೆ ಬರುತ್ತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ರಾಜ್ಯಕ್ಕೆ 22 ಬಾರಿ ಬಂದಿದ್ದರು. ಈಗಲೂ ರಾಜ್ಯ ಪ್ರವಾಸದಲ್ಲಿದ್ದಾರೆ ಎಂದು ಟೀಕಿಸಿದರು.

    ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುವ ಬದಲಿಗೆ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ನಾವೂ ಕೂಡ ಹಿಂದೂಗಳೇ. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ರಾಷ್ಟ್ರ. ದೇಶವನ್ನು ಒಡೆದು ಹಾಳುವ ನೀತಿ ಬಿಜೆಪಿಯದ್ದು. ಸಂವಿಧಾನದ ಆಶಯದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು ಎಂದರು.

    ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ದೇಶಕ್ಕೆ ಏನು ಕೊಡುಗೆ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆ ಏನು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ ಸಾಲ ಮನ್ನಾಮಾಡಿದರು. ಸಿದ್ದರಾಮಯ್ಯ ಅವರು ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡಿದರು. ಈಗಿನ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಹೇಳಿದರು.

    ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಕ್ಕರೆ ರೈತರು ಸರ್ಕಾರದಿಂದ ಏನನ್ನೂ ಬಯಸುವುದಿಲ್ಲ. ರೈತರ ಹಿತ ನಮಗೆ ಮುಖ್ಯವಾಗಿದ್ದು, ಈ ಕಾರಣಕ್ಕಾಗಿ ಸ್ವಾಮಿನಾಥನ್ ವರದಿ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಲಿದೆ. ಕೃಷಿ ಸಾಲ ಮನ್ನಾ ಮಾಡುವಂತಹ ನಿರ್ಧಾರ ಮಾಡಿದೆ. ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಹಿಳೆಯ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂ. ಜಮಾ ಮಾಡಲಿದೆ. ವಿದ್ಯಾವಂತ ನಿರುದ್ಯೋಗಿ ಯುವಕನಿಗೆ ಉದ್ಯೋಗದ ಗ್ಯಾರಂಟಿಯನ್ನು ನೀಡಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಅವರ ಬಣ್ಣದ ಮಾತುಗಳಿಗೆ ಈ ಬಾರಿ ಮತದಾರರು ಮರುಳಾಗುವುದಿಲ್ಲ. ಹತ್ತು ವರ್ಷ ಅವಕಾಶ ಕೊಟ್ಟು ನಿಮ್ಮ ಆಡಳಿತ ನೋಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವ ಬದಲಿಗೆ ಕೃಷಿ ವೆಚ್ಚ ದ್ವಿಗುಣ ಮಾಡಿದಿರಿ. ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿ ಪಕೋಡಾ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದಿರಿ. ಅಭಿವೃದ್ಧಿ ಬದಲಿಗೆ ಧರ್ಮ-ಧರ್ಮಗಳು ನಡುವೆ ಜಾತಿ-ಜಾತಿಗಳ ನಡುವೆ ಸಂಘರ್ಷ ಬೆಳೆಯುಂತೆ ಮಾಡಿದ್ದೇ ನಿಮ್ಮ ಹತ್ತು ವರ್ಷಗಳ ಸಾಧನೆ ಎಂದು ಟೀಕಿಸಿದರು.

    ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಮಾತಿನಿಂದ ಅಭಿವೃದ್ಧಿ ಸಾಧ್ಯವೇ ? ಎಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಟೀಕಿಸಿದರು. ಮಾತಿನಿಂದ ದೇಶ ಅಭಿವೃದ್ಧಿಯಾಗದು. ದೇಶದ ಸಮಸ್ಯೆಗಳೇನು ಎಂಬುದನ್ನು ಅರಿತು ಪರಿಹಾರಕ್ಕೆ ಕಾರ್ಯೋನ್ಮುಖವಾಗಬೇಕು ಎಂದರು.

    ವಿದೇಶಗಳಲ್ಲಿ ಶೈಕ್ಷಣಿಕ ನೀತಿ, ವಿದೇಶಾಂಗ ನೀತಿ, ಆರ್ಥಿಕ ನೀತಿ ಮೇಲೆ ಚುನಾವಣೆಗಳು ನಡೆಯುತ್ತವೆ. ಆದರೆ ಭಾರತದಲ್ಲಿ ಮೋದಿ ಅವರು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ನಮ್ಮ ಕೆಲಸ ನೋಡಿ ಕೂಲಿ ಕೊಡಿ ಎಂದು ಮತ ಕೇಳುತ್ತಿಲ್ಲ. ರಾಮನನ್ನು ಮುಂದೆ ಇಟ್ಟುಕೊಂಡು ಮತದಾರರ ಬಳಿ ಬರುತ್ತಿದ್ದಾರೆ ಎಂದು ಟೀಕಿಸಿದರು.

    ಈ ಚುನಾವಣೆ ದೇಶದ ಭವಿಷ್ಯ ಬರೆಯುವ ಚುನಾವಣೆ. ಮೋದಿ ಮೂರನೆ ಬಾರಿ ಮತದಾರರ ಬಳಿ ಬರುತ್ತಿದ್ದಾರೆ. ಅವರು ಎಲ್ಲಿಯಾದರೂ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಿದ್ದರೆ ಹೇಳಿ ನಿಮಗೆ ನಾನೇ ಬಹುಮಾನ ಕೊಡುವೆ ಎಂದರು.

    ಹಿಂದುತ್ವದ ಮಂತ್ರ ಹೊಟ್ಟೆ ತುಂಬಿಸುವುದಿಲ್ಲ. ಬದಲಿಗೆ ಅನ್ನದಾತನ ಸಮಸ್ಯೆಗೆ ಸ್ಪಂದಿಸಬೇಕು. ಯುವಕರಿಗೆ ಉದ್ಯೋಗ ಕೊಡಬೇಕು. ಮಹಿಳೆಯರ ಸಬಲೀಕರಣದ ಚಿಂತನೆ ಮಾಡಬೇಕು. ಇದ್ಯಾವುದನ್ನು ಮೋದಿ ಮಾತನಾಡುವುದಿಲ್ಲ. ರೈತರು ಬೆಂಬಲ ಬೆಲೆ ಕೇಳಿಕೊಂಡು ಚಳವಳಿ ಮಾಡಿದರೆ ಈ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರು ಎಂದು ವಾಗ್ದಾಳಿ ಮಾಡಿದರು.

    ಭಾನುವಾರ ಅನಗವಾಡಿ, ಕುಂದರಗಿ, ಅರಕೇರಿ, ಸುನಗ, ನಾಗರಾಳ, ಸಿದ್ಧಪೂರ, ತೆಗ್ಗಿ, ಗಲಗಲಿ ಗ್ರಾಮಗಳಿಗೆ ತೆರಳಿದ ಸಂಯುಕ್ತ ಪಾಟೀಲ, ಶಾಸಕ ಜೆ.ಟಿ. ಪಾಟೀಲ, ಬಸವಪ್ರಭು ಸರನಾಡಗೌಡ ಅವರು ಮತಯಾಚನೆ ಮಾಡಿದರು. ಸ್ಥಳೀಯ ಮುಖಂಡರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

    ಕೇಂದ್ರದ ಗ್ಯಾರಂಟಿಗಳೂ ನಿಶ್ಚಿತ ; ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ನ್ಯಾಯಪತ್ರದಲ್ಲಿ ಪ್ರಕಟಿಸಿರುವ ಎಲ್ಲ ಗ್ಯಾರಂಟಿಗಳು ಜಾರಿಗೆ ಬರಲಿವೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಹೇಳಿದರು.

    ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಇಲ್ಲ. ಆದರೆ ಕೃಷಿ ವೆಚ್ಚ ಮಾತ್ರ ದುಪ್ಪಟ್ಟಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡತನದಲ್ಲಿರುವ ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೊಂದಿಗೆ ಕೇಂದ್ರದ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದರೆ ಮತ್ತಷ್ಟು ಆಸರೆಯಾಗಲಿದೆ ಎಂದರು.

    ಸುಳ್ಳಿಗೆ ಕೊನೆಯಾಗಲಿದೆ ; ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಅವರ ಸುಳ್ಳು ಮಾತುಗಳು ಈ ಬಾರಿ ಕೊನೆಯಾಗಲಿವೆ ಎಂದು ಎಐಸಿಸಿ ವೀಕ್ಷಕ ಡಾ. ಸೈಯದ್ ಹೇಳಿದರು.

    ರಾಜಸ್ಥಾನ ಸರ್ಕಾರ ಆರೋಗ್ಯ ವಿಮೆ ಜಾರಿಗೆ ತಂದಿದ್ದು, ಇದೇ ಮಾದರಿಯಲ್ಲಿ ಕೇಂದ್ರದಲ್ಲೂ ಆರೋಗ್ಯವಿಮೆ ಜಾರಿಗೆ ಬರಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 25 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು ಭರಿಸಲಿದೆ. ನ್ಯಾಯಪತ್ರದಲ್ಲಿ ಪ್ರಕಟಿಸಿರುವ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    May 22, 2025 ಬಾಗಲಕೋಟೆ

    ಅಯೋಧ್ಯೆಗೆ ವಾರಕ್ಕೆ ಮೂರು ದಿನ ರೈಲು ಓಡಿಸಿ: ಪೂಜಾರ

    May 22, 2025 ಬಾಗಲಕೋಟೆ

    ಶೀಘ್ರದಲ್ಲೇ ಬಾಗಲಕೋಟೆಗೆ ವಂದೇ ಭಾರತ ರೈಲು: ಸೋಮಣ್ಣ

    May 22, 2025 ಬಾಗಲಕೋಟೆ

    ಮೋದಿ ಅಪಮಾನಿಸಿ ಪೋಸ್ಟ್; ಯುವಕ ಪೋಲಿಸ್ ವಶಕ್ಕೆ

    May 20, 2025 ಬಾಗಲಕೋಟೆ

    ರಾಜಕೀಯ ಪರಾಕಾಷ್ಟೆ ತಲುಪಿದ ಬಣ ಬಡಿದಾಟ

    May 20, 2025 ಬಾಗಲಕೋಟೆ

    ನೌಕರಿ ಇಲ್ಲವೇ ದಯಾ ಮರಣ: ವಿಜಯಲಕ್ಷ್ಮೀ

    May 20, 2025 ಬಾಗಲಕೋಟೆ

    ಇನ್ನೂ 5 ದಿನಗಳ ಕಾಲ ಮಳೆ ಸಾಧ್ಯತೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.