ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಿಜೆಪಿ ಮೈತ್ರಿಕೂಟದ ನಾಯಕರ ನಿದ್ರೆಗೆಡಿಸಿದ್ದು, ಸೋಲಿನ ಭೀತಿಯಿಂದ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಾಗ್ದಾಳಿ ಮಾಡಿದ್ದಾರೆ.
ಬಾದಾಮಿ ತಾಲೂಕಿನ ಬೇಲೂರಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆ ಮಾಡಿದ್ದರು. ಈಗ ಅವರದೇ ಧಾಟಿಯಲ್ಲಿ ಚಿತ್ರನಟಿ ಶ್ರುತಿ ಮಾತನಾಡಿದ್ದಾರೆ. ಒಬ್ಬ ಮಹಿಳೆಯಾಗಿ ಈ ರೀತಿ ಸ್ತ್ರೀ ಸಮೂಹವನ್ನು ಅಪಮಾನ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಪಿಯುಸಿ ಟಾಪರ್ ಗಳು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ನಮ್ಮ ಸಾಧನೆಗೆ ಕಾರಣವಾಗಿವೆ ಎಂದು ಹೇಳುತ್ತಿದ್ದಾರೆ. ಲಕ್ಷ ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಕೀಳುಮಟ್ಟದ ಟೀಕೆಗೆ ಇಳಿದಿದ್ದಾರೆ ಎಂದರು.
ಬೆಲೆ ಏರಿಕೆಯಿಂದ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಈ ಕುಟುಂಬಗಳಿಗೆ ಆಸರೆಯಾಗಿವೆ. ಟೀಕೆ ಮಾಡುವವರಿಗೆ ಬಡ ಕುಟುಂಬಗಳ ಕಷ್ಟದ ಅರಿವು ಹೇಗಾಗಬೇಕು ಎಂದು ಪ್ರಶ್ನಿಸಿದರು.
ಅಡುಗೆ ಎಣ್ಣೆ, ಪೆಟ್ರೋಲ್ , ಡೀಸೆಲ್, ಕೃಷಿ ಉಪಕರಣಗಳು, ರಸಗೊಬ್ಬರ, ಭಿತ್ತನೆ ಬೀಜ .. ಹೀಗೆ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ರೈತರ ಆದಾಯ ದ್ವಿಗುಣವಾಗಲಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ದ್ವಿಗುಣವಾಗಿದೆ ಎಂದು ಕುಟುಕಿದರು.
ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾದಾಗ ನೆರವು ಕೇಳಿದರೆ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನೆಪ ಹೇಳಿದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಳ್ಳಬೇಕಾಯಿತು. ಕೋರ್ಟ್ ಹೇಳಿದ ನಂತರ ಹಣ ಬಿಡುಗಡೆಯ ಮಾತು ಹೇಳಿದ್ದಾರೆ ಎಂದು ಸಂಯುಕ್ತಾ ಪಾಟೀಲ ಹೇಳಿದರು.
ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ನೆರವು ಬಿಡುಗಡೆ ಮಾಡಿ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರೆ ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸ ಬರಿದು ಮಾಡಿ ದಿವಾಳಿಯಾಗಿ ಈಗ ನಮ್ಮ ಬಳಿ ಬಂದಿದ್ದೀರಿ ಎಂದು ಲಘುವಾಗಿ ಮಾತನಾಡಿದರು. ನಾವು ಕೇಂದ್ರ ಸರ್ಕಾರಕ್ಕೆ ಬಿಕ್ಷೆ ಕೇಳುತ್ತಿಲ್ಲ. ತೆರಿಗೆ ಪಾಲಿನ ನಮ್ಮ ಹಣವನ್ನು ಕೇಳುತ್ತಿದ್ದೇವೆ ಎಂದರು.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ರೈತರ ಬಗ್ಗೆ ಕಳಕಳಿಯನ್ನು ಹೊಂದಿರಬೇಕಿತ್ತು. ಆದರೆ ಅವರು ಕೀಳುಮಟ್ಟದಲ್ಲಿ ಮಾತನಾಡಿದರು ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯುವ ಕನಸು ನನ್ನದು. ರೈಲ್ವೆ ಯೋಜನೆ, ಕಳಸಾ ಬಂಡೂರಿ ಯೋಜನೆ, ಯುಕೆಪಿ, ಜವಳಿ ಪಾರ್ಕ್ ಸ್ಥಾಪನೆಯ ಆಶಯ ನನ್ನದು. ಒಂದುಬಾರಿ ಅವಕಾಶ ಕೊಡಿ, ನಿಮ್ಮ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ರೈತಾಪಿ ವರ್ಗಕ್ಕೆ ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆ ದೊಡ್ಡದು. ನನಗೆ ಮಾಜಿ ಸಚಿವ, ತಂದೆ ಬಿ.ಬಿ. ಚಿಮ್ಮನಕಟ್ಟಿ ಮತ್ತು ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಇಬ್ಬರ ಬಲ ಇದೆ. ಈ ಬಲದಿಂದ ಕ್ಷೇತ್ರಕ್ಕೆ ಏನಾದರೂ ಮಾಡಲು ಸಾಧ್ಯವಿದೆ. ಬಹುತೇಕ ಅಧಿಕಾರಿಗಳು, ದಯವಿಟ್ಟು ಸಿಎಂ ಕಡೆಯಿಂದ ಫೋನ್ ಮಾಡಿಸಬೇಡಿ, ಏನಾದರೂ ಕೆಲಸ ಇದ್ದರೆ ನೀವೇ ಹೇಳಿ ಎನ್ನುತ್ತಾರೆ. ಅಧಿಕಾರಿಗಳು ಕೆಲಸ ಮಾಡದಿದ್ದರೆ ಸಿಎಂ ಸಿದ್ದರಾಮಯ್ಯ ಅವರು ಸುಮ್ಮನೆ ಇರುವುದಿಲ್ಲ ಎಂದರು.
ಸಂಯುಕ್ತ ಪಾಟೀಲ ಅವರನ್ನು ನಿಮ್ಮ ಉಡಿಗೆ ಹಾಕಿದ್ದೇವೆ. ಅವರನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು ಎಂದು ಮತದಾರರಿಗೆ ಮನವಿ ಮಾಡಿದ ಅವರು, ಸಂಸತ್ತಿನಲ್ಲಿ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುವವರು ಬೇಕು. ಸಂಯುಕ್ತಾ ಪಾಟೀಲ ಅವರು ವಕೀಲರಾಗಿದ್ದು, ಅಪಾರ ಜ್ಞಾನ ಹೊಂದಿದ್ದಾರೆ. ಇಂಥವರು ಸಂಸತ್ತಿಗೆ ಆಯ್ಕೆಯಾಗಬೇಕು ಎಂದರು.
ಕೇಂದ್ರದ ಬಿಜೆಪಿ ನಾಯಕರು ರೈತರ ಬಗ್ಗೆ ಅಪಾರ ಕಳಕಳಿ ವ್ಯಕ್ತಪಡಿಸುತ್ತಾರೆ. ಆದರೆ ಯಾವ ಕಾರಣಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಟಾನಕ್ಕೆ ತರಲಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೆ ಏಕೆ ಅನುದಾನ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಆರ್. ಪಾಟೀಲ, ಎಂ.ಡಿ. ಯಲಿಗಾರ್, ಶಶಿಧರ್, ಎ.ಎಂ. ತಹಸೀಲ್ದಾರ್, ಬಸವರಾಜ ಡೊಳ್ಳಿನ, ಶ್ರೀಮತಿ ಸಾವಕ್ಕ ಅಳಗುಂಡಿ, ಅನುರಾಧಾ ದೊಡ್ಡಮನಿ, ಮತ್ತಿತರರು ಉಪಸ್ಥಿತರಿದ್ದರು.