ಬಾಗಲಕೋಟೆ: ಸಮೃದ್ದಿ ಹೆಚ್ಚಾದಂತೆ ಸಂಸ್ಕೃತಿ ಕ್ಷೀಣಿಸಬಾರದು. ಇವೆರಡೂ ಸಂತುಲನವಾದಾಗ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.
ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಸ್ಥಳೀಯ ಹೇಮ ವೇಮನ ಸದ್ಬೋಧನ ಪೀಠ ರವಿವಾರ ಹಮ್ಮಿಕೊಂಡಿದ್ದ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ ತಳಹದಿಯ ಮೇಲೆ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳಬೇಕು. ಇಂತಹ ವ್ಯವಸ್ಥೆಯಲ್ಲಿ ಶ್ರೇಷ್ಠ ಸಂಸ್ಕಾರ ಹಾಗೂ ಸಂಸ್ಕೃತಿಯ ಗಟ್ಟಿತನವಿರುತ್ತದೆ ಎಂದ ಗೌಡಪ್ಪಗೋಳ, ಮಹಾತ್ಮರು, ಶರಣರ ಶ್ರೇಷ್ಟತೆಗಳನ್ನು ಧಾರಣೆ ಮಾಡಿಕೊಂಡು ಸಮರ್ಪಣಾ ಭಾವದಿಂದ ಬದುಕಿದರೆ ಮನುಷ್ಯ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಮುಖ್ಯ ಅತಿಥಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ವೇಮನ ಪೀಠದ ಸಂಯೋಜಕ ಡಾ.ಹೇಮರಡ್ಡಿ ನೀಲಗುಂದ ಮಾತನಾಡಿ, ಸಂಪತ್ತು ಗಳಿಸುವುದೇ ಜೀವನವಲ್ಲ. ಗಳಿಸಿದ ಸಂಪತ್ತು ಜೀವನದಲ್ಲಿ ಪ್ರಸನ್ನತೆ ಮೂಡಿಸುವಂತಿರಬೇಕು. ನೆಮ್ಮದಿಯ ಬದುಕು ಕಾಣಲು ಗಳಿಸಿದ ಸಂಪತ್ತು ಸದ್ವಿನಿಯೋಗವಾಗಬೇಕು. ಪರೋಪಕಾರದ ಜೀವನದಿಂದ ದೈವತ್ವ ಪಡೆಯುವ ಪ್ರಯತ್ನ ನಮ್ಮದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಎಸ್.ಕೆ.ಯಡಹಳ್ಳಿ, ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನರನ್ನು ನಾಡಿಗೆ ಪರಿಚಯಿಸುವ ಮೂಲಕ ಹೆಸರು ತಂದುಕೊಂಡಿರುವ ಬೆನಕಟ್ಟಿ ಗ್ರಾಮದ ಹೇಮ ವೇಮನ ಸದ್ಬೋಧನ ಪೀಠದ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಳ್ಳುವ ಕಾರ್ಯ ಮಾದರಿಯಾಗಿದೆ ಎಂದರು.
ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹಾಗೂ ಅಮಲಝರಿಯ ಶರೀಫ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ, ಸದ್ಬೋಧನ ಪೀಠದ ನಿರ್ದೇಶಕ ರಂಗಣ್ಣ ಕಟಗೇರಿ, ಆಶ್ರಯದಾತರಾದ ಶಂಕರ ಯಡಹಳ್ಳಿ ಹಾಗೂ ಹೇಮಾ ಎಸ್.ಯಡಹಳ್ಳಿ ಅತಿಥಿಗಳಾಗಿದ್ದರು.
6 ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದಾನಿಗಳು ದತ್ತು ಸ್ವೀಕರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತಲ್ಲದೇ ಸಾಧಕ ವಿದ್ಯಾರ್ಥಿಗಳು, ದಾನಿಗಳು ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಅಶೋಕ ಮೆಳ್ಳಿ ಅವರನ್ನು ಸನ್ಮಾನಿಸಲಾಯಿತು.
ಹೇಮರಡ್ಡಿ ಮಲ್ಲಮಾಂಬೆ ಭಜನಾ ತಂಡದವರು ಪ್ರಾರ್ಥಿಸಿದರು. ಪಾಂಡು ಸನ್ನಪ್ಪನವರ ಸ್ವಾಗತಿಸಿದರು. ಅಜೀತಗೌಡ ಪಾಟೀಲ, ಸಂಜಯ ನಡುವಿನಮನಿ, ಶ್ರೀನಿವಾಸ ಬೆನಕಟ್ಟಿ ನಿರೂಪಿಸಿದರು. ಗಂಗಾ ಅಮಾತೆಪ್ಪನವರ ವಂದಿಸಿದರು.