ಬಹುನಿರೀಕ್ಷಿತ ಮತ್ತು ಅದ್ದೂರಿ ಬಜೆಟ್‌ನ ‘ರಾಮಾಯಣ’ ಸಿನಿಮಾದ ಮೊದಲ ಭಾಗದ Introduction ವಿಡಿಯೋ ಜುಲೈ 3ರಂದು ಬಿಡುಗಡೆಗೊಂಡಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರದ ವಿಡಿಯೋ ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶೇಷವಾಗಿ ರಣಬೀರ್ ಕಪೂರ್ ಬಾಣ ಬಿಡುವ ದೃಶ್ಯ ಹಾಗೂ ಯಶ್ ಅವರ ಲುಕ್ ಅಭಿಮಾನಿಗಳ ಗಮನ ಸೆಳೆದಿವೆ.
ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ, ಮತ್ತು ಸನ್ನಿ ಡಿಯೋಲ್ ಹನುಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈ ವಿಡಿಯೋ ಮೂಲಕ ಖಚಿತವಾಗಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಹಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡಿದ್ದು, ಕುಮಾರ್ ವಿಶ್ವಾಸ್ ಅವರ ಸಾಹಿತ್ಯ ಕಾವ್ಯಾತ್ಮಕ ಸ್ಪರ್ಶ ನೀಡಲಿದೆ. ಜೊತೆಗೆ, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ DNEG ಸಂಸ್ಥೆ ಈ ಚಿತ್ರದಲ್ಲಿ VFX ಕೆಲಸ ಮಾಡಿದ್ದು ಮತ್ತೊಂದು ವಿಶೇಷವಾಗಿದೆ.
‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಭಾಗವು 2026ರ ದೀಪಾವಳಿಗೆ ತೆರೆಕಾಣಲಿದ್ದರೆ, ಎರಡನೇ ಭಾಗವು 2027ರ ದೀಪಾವಳಿಗೆ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.