ಬೆಂಗಳೂರು: ನೂತನವಾಗಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದರು.
ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಸದೆ ಇರುವ ಕಾರಣಕ್ಕೆ ಸ್ಥಳೀಯವಾಗಿ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಶಿರೂರು, ಲೋಕಾಪೂರ, ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಗ್ರಾ.ಪಂ ಪರಿಗಣಿಸಿ ಘೋಷಣೆ ಮಾಡಲಾಗಿದೆ ಎಂದರು.
ಶಿರೂರು, ಲೋಕಾಪರು, ಬಬಲೇಶ್ವರ ಮತ್ತು ತಿಕೋಟಾ ಪಂಚಾಯಿತಿಗಳನ್ನು ರಚಿಸಲಾಗಿದೆ. ಶಿರೂರು ಪಟ್ಟಣ ಪಂಚಾಯಿತಿಗೆ ಮೀಸಲಾತಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಜಿಲ್ಲಾಧಿಕಾರಿ ವರದಿ ಸ್ವೀಕೃತವಾದ ಕೂಡಲೇ ಅಂತಿಮ ವಾರ್ಡ್ವಾರು ಮೀಸಲಾತಿಯನ್ನು ಪ್ರಕಟಿಸಲು ಕ್ರಮವಹಿಸಲಾಗುತ್ತದೆ ಎಂದು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಉತ್ತರಿಸಿದರು.
ಲೋಕಾಪುರ, ಬಬಲೇಶ್ವರ ಮತ್ತು ತಿಕೋಟಾ ಪಟ್ಟಣ ಪಂಚಾಯಿತಿಗೆ ವಾರ್ಡ್ವಾರು ಮೀಸಲಾತಿಯನ್ನು ನಿಗಧಿಪಡಿಸುವ ಸಂಬಂಧ ಜಿಲ್ಲಾಧಿಕಾರಿ ಅವರಿಂದ ೨೦೧೧ರ ಜನಗಣತಿಯ ಅನ್ವಯ ವಾರ್ಡ್ವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿರುವ ಅಂತಿಮ ಅಧಿಸೂಚನೆಯ ಜನಸಂಖ್ಯೆ ಮಾಹಿತಿ ಸ್ವೀಕೃತವಾಗಿದ್ದು ಮೀಸಲಾತಿಯನ್ನು ನಿಗಧಿ ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಸುಗಮವಾಗಿ ಆಡಳಿತ ನಡೆಸಲು ತಹಶೀಲ್ದಾರಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಕೆಲಸವು ಕುಂಠಿತಗೊಂಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.