ಬಾಗಲಕೋಟೆ: ಜಿಲ್ಲೆಯ ಹೂಲಗೇರಿ, ಅಗಸನಕೊಪ್ಪ, ಉಗಲವಾಟ, ಹಳಗೇರಿ, ಮಮಟಗೇರಿ ಸೇರಿದಂತೆ ಬಾದಾಮಿ ತಾಲೂಕಿನ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎನ್.ವಾಯ್. ಬಸರಿಗಿಡದ ಭೇಟಿ ನೀಡಿ ಪರಿಶೀಲಿಸಿದರು.
ಹೂಲಗೇರಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಸಂಖ್ಯೆ, ಪೌಷ್ಟಿಕ ಆಹಾರ ವಿತರಣೆ, ಆಹಾರ ಧಾನ್ಯಗಳನ್ನು ಪರಿಶೀಲಿಸಿ, ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ತೆರಳಿ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಾತಿ ಮತ್ತು ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಮಾಲಗಿ ಗ್ರಾಮದ ಅಂಗನವಾಡಿ ಕಟ್ಟಡ, ಶಾಲಾ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿ ಶಾಲೆಗೆ ಅಗತ್ಯವಾದ ಕೌಂಪೌಂಡ್ ಕಾಮಗಾರಿ ಕೈಗೊಳ್ಳುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಅಡುಗೆ ಕೊಠಡಿಗೆ ತೆರಳಿ ಆಹಾರ ತಯಾರಿಸುವ ಕ್ರಮ ಹಾಗೂ ಆಹಾರ ಧಾನ್ಯಗಳ ಗುಣಮಟ್ಟ ವೀಕ್ಷಿಸಿದರು. ಅಗಸನಕೊಪ್ಪ ಗ್ರಾಮದ ಆಯುಷಮಾನ್ ಆರೋಗ್ಯ ಕೇಂದ್ರಕ್ಕೆ ತೆರಳಿ ಔಷಧಿಗಳ ದಾಸ್ತಾನು, ಚಿಕಿತ್ಸೆ ಪಡೆದವರ ವಿವರ, ಸಿಬ್ಬಂದಿ ಹಾಜರಾತಿ ಗಮನಿಸಿದರು. ಮಮಟಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಗಲವಾಟ ಗ್ರಾಮದ ಬದು ನಿರ್ವಹಣೆ ಕಾಮಗಾರಿ ಪರಿಶೀಲಿಸಿ ನಿಗದಿತ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಮಮಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳಗೇರಿ ಗ್ರಾಮದ ಹಳ್ಳದ ಹೂಳೇತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಜೊತೆ ಸಂವಾದ ಮಾಡಿ, ಎನ್.ಎನ್.ಎಂ.ಎಸ್ ಹಾಜರಿ ಪರಿಶೀಲಿಸಿದರು. ನಂತರ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ತೆರಳಿ ವಿವಿಧ ಯೋಜನೆಗಳ ಬಗ್ಗೆ ಅನುಷ್ಠಾನ ಬಗ್ಗೆ ಮಾಹಿತಿ ಪಡೆದುಕೊಂಡರು.
ಭೇಟಿ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀದೇವಿ ಲಮಾಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಮಾಕೊಂಡ, ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶಿವಲಿಂಗಯ್ಯ ಹಿರೇಮಠ, ಸವಿತಾ ನಂದೆಪ್ಪನವರ, ಡಿ.ಐ.ಇಸಿ ಅಜಯ ಸೂಳಿಕೇರಿ, ಸಿದ್ದಲಿಂಗಯ್ಯ ಹಿರೇಮಠ, ಟಿ.ಐ.ಇಸಿ ಸಮೀರ ಉಮರ್ಜಿ, ಬಿ.ಎಫ್.ಟಿ ಅನೀಲ ಮೇಟಿ, ಮಂಜುನಾಥ ಸಿದ್ದಾಪೂರ ಸೇರಿದಂತೆ ಇತರರು ಇದ್ದರು.