ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷದ ಸಂಭ್ರಮದೊಂದಿಗೆ ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಾಳೆ ದಿ.5 ರಂದು ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರವು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ನಗರದಲ್ಲಿ ಪಥಸಂಚಲನಕ್ಕೆ ಸಿದ್ದತೆಗಳು ನಡೆದಿದ್ದು, ಪಥಸಂಚಲನ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತ, ಎಂ.ಜಿ.ರೋಡ, ವಲ್ಲಭಬಾಯಿ ಚೌಕ, ಹಳಪೇಟ, ಜೈನಪೇಟ, ಹಳೇ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧೆಡೆ ಕಟೌಟ ಬ್ಯಾನರಗಳು ರಾರಾಜಿಸುತ್ತಿವೆ. ಬಾಗಲಕೋಟೆ ನಗರವು ಸಂಪೂರ್ಣ ಕೇಸರಿಮಯ ಗೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ಜನಾಕರ್ಷಣೆ ಕೇಂದ್ರವಾಗಿದೆ.
ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಪಥಸಂಚಲನದಲ್ಲಿ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಖ್ಯವಾಗಿ ಚಿಕ್ಕಮಕ್ಕಳು ರಾಣಿ ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಭಗತ ಸಿಂಗ್, ಶಿವಾಜಿ ಮಹಾರಾಜ ಸೇರಿದಂತೆ ವಿವಿಧ ಗಣ್ಯರ ವೇಷ ಭೂಷಣ ಧರಿಸಿ ಗಮನ ಸೆಳೆಯಲಿದ್ದಾರೆ. ಪುಷ್ಪಿವೃಷ್ಠಿಗಳು ಕಲರವ, ಪಥಸಂಚಲನ ಮಾರ್ಗದಲ್ಲಿ ಬಿಡಿಸುವ ರಂಗೋಲಿ ಹಬ್ಬದ ವಾತಾವರಣ ಸೃಷ್ಠಿ ಮಾಡಲಿದೆ.
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸುವ ಸ್ವಯಂ ಸೇವಕರು ಸಮವಸ್ತ್ರ ಖರೀದಿಯಲ್ಲಿ ತೊಡಗಿದ್ದು, ಕಳೆದ ಒಂದು ತಿಂಗಳಿಂದ ಪಥಸಂಚಲನಕ್ಕೆ ಬೇಕಾಗುವ ಸಿದ್ದತೆ ಅಂತಿಮ ಹಂತ ತಲುಪಿದ್ದು, ಘೋಷ ವಾದ್ಯ ತಂಡಗಳು ನಿತ್ಯವು ತಾಲೀಮು ನಡೆಸಿದ್ದಾರೆ.
ನಾಳೆ ಮಧ್ಯಾಹ್ನ 4 ಗಂಟೆಗೆ ನಗರದ ಬಸವೇಶ್ವರ ಕಾಲೇಜು ಮೈದಾನದಿಂದ ಪಥಸಂಚಲನವು ಎರಡು ಮಾರ್ಗಗಳಲ್ಲಿ ನಗರದಲ್ಲಿ ಸಂಚರಿಸಲಿದ್ದು, ಎರಡು ಪಥಸಂಚಲನವು 4.52 ಕ್ಕೆ ಬಸವೇಶ್ವರ ವೃತ್ತದಲ್ಲಿ ಸೇರಲಿವೆ. ನಂತರ 5.25ಕ್ಕೆ ಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಸಮಾರಂಭ ಜರುಗಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್‍ಸ್ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಉದ್ಯಮಿಗಳಾದ ವಿಲಾಸ ಡಿ.ಬದಾಮಿ ಅವರು ಆಗಮಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖರಾದ ರಾಮಚಂದ್ರ ಏಡಕೆ ಉಪಸ್ಥಿತರಿರುವರು.
ಪೊಲೀಸ್ ಬಿಗಿ ಬಂದೋಬಸ್ತ್:
ಎಸ್ಪಿ 1, ಹೆಚ್ಚುವರಿ ಎಸ್ಪಿ 2, ಡಿಎಸ್ಪಿ 7, ಸಿಪಿಐ 15, ಪಿಎಸ್‌ಐ 62, ಎಎಸ್‌ಐ 74, ಹೆಡ್ ಕಾನ್ಸ್ಟೇಬಲ್/ ಕಾನ್ಸ್ಟೇಬಲ್ 602, ಹೋಮ್ ಗಾಡ್ಸ್ 320, ಡಿಎಆರ್ 5, ಕೆಎಸ್‌ಆರ್‌ಪಿ 4, ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಬಿಗಿಭದ್ರತೆಯನ್ನು ಮಾಡಲಾಗಿದೆ.

