Close Menu
    Facebook X (Twitter) Instagram YouTube
    Facebook YouTube X (Twitter) Instagram
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • ಸಣ್ಣ ಸುದ್ದಿಗಳು
    • ಅರ್ಜಿ ಆಹ್ವಾನ
    • EPaper
    • ಲೇಖನಗಳು
    Facebook X (Twitter) Instagram
    Sanjedarshan
    Home»ಲೇಖನಗಳು»ಜನ ಮೆಚ್ಚಿದ ಜನನಾಯಕ ಪಿ.ಎಚ್.ಪೂಜಾರ
    ಲೇಖನಗಳು

    ಜನ ಮೆಚ್ಚಿದ ಜನನಾಯಕ ಪಿ.ಎಚ್.ಪೂಜಾರ

    ಸಂಜೆ ದರ್ಶನBy ಸಂಜೆ ದರ್ಶನJuly 15, 20254 Mins Read
    ಪಿ.ಎಚ್.ಪೂಜಾರ

    ಪಿ.ಎಚ್.ಪೂಜಾರ ಅವರು ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು. ಈಗ ವಿಧಾನ ಪರಿಷತ್ತ ಸದಸ್ಯರಾಗಿ ಪುನಃ ರಾಜಕೀಯ ಅಧಿಕಾರ ಪಡೆದಿದ್ದಾರೆ. ಇದೇ ದಿ.೧೬ ರಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಸಾಧನೆ ಸಿದ್ಧಿಯ ಕುರಿತು ಈ ಲೇಖನ.

    ಜನರನ್ನು ಎದುರು ಹಾಕಿಕೊಳ್ಳಬೇಕಾದೀತೆಂದು ಸತ್ಯವನ್ನು ಅವಮಾನಗೊಳಿಸಬೇಡ ಎಂದು ವಿಶ್ವ ಕವಿ ರವೀಂದ್ರನಾಥ ಠಾಗೋರ ಅವರು ಹೇಳಿದ್ದಾರೆ. ಈ ಮಾತಿನಂತೆ ನಡೆಯುವವರು ಸಮಾಜದಲ್ಲಿ ಅತೀ ವಿರಳ ಸಂಖ್ಯೆಯಲ್ಲಿ ಸಿಗುತ್ತಾರೆ, ಅಂಥ ವಿರಳ ವ್ಯಕ್ತಿಗಳಲ್ಲಿ ನನ್ನ ನೆಚ್ಚಿನ ಜನನಾಯಕರಾದ ಪಿ ಎಚ್ ಪೂಜಾರ ಒಬ್ಬರು. ಅವರು ಜೀವನದುದ್ದಕ್ಕೂ ತಾವು ನಂಬಿದ ತತ್ವಗಳಲ್ಲಿ ಬದುಕಿದ್ದಾರೆ.

    ನಾನು ಕಂಡ ಅಪರೂಪದ ಹೃದಯವಂತ ರಾಜಕೀಯ ದುರೀಣರಲ್ಲಿ ಪೂಜಾರವರು ಒಬ್ಬರು. ಅವರು ಬಹುಮುಖ ಪ್ರತಿಭೆಯ ಸ್ನೇಹ ಜೀವಿ. ಅವರು ತಮ್ಮ ಹತ್ತಿರಕ್ಕೆ ಬಂದವರೆಲ್ಲರ ಯೋಗಕ್ಷೇಮ ವಿಚಾರಿಸುವ ಮಾನವೀಯ ಗುಣಗಳನ್ನು ಬೆಳೆಸಿಕೊಂಡಿ ದ್ದಾರೆ. ರಾಜಕೀಯ ನಾಯಕರು ಹೀಗೂ ಇರಬಹುದೇ ಎಂದು ಅವರನ್ನು ನೋಡಿದವರಿಗೆ ಅನಿಸದೇ ಇರದು. ಅವರೊಬ್ಬ ಅಪ್ರತಿಮ ಜನನಾಯಕರು ಎಂದು ತಿಳಿಸಲು ಹೆಮ್ಮೆಯೆನಿಸುತ್ತದೆ.

    ಪೂಜಾರ ಎನ್ನುವ ಪದವೇ ಆತ್ಮೀಯತೆಯಿಂದ ಕೂಡಿದ ಪದ. ಇದರಲ್ಲಿ ಪೂಜೆ ಇದೆ, ಆಧ್ಯಾತ್ಮ ಇದೆ. ನಡೆ, ನುಡಿ, ಸ್ನೇಹಗಳಲ್ಲಿ ಪೂಜಾರ ಅವರದು ಸಂತಸಗೊಳಿಸುವ ವ್ಯಕ್ತಿತ್ವ. ಅವರಲ್ಲಿ ಮಗುವಿನ ಮುಗ್ಧತೆ ಇದೆ. ಪೂಜಾರವರ ರಾಜಕೀಯ ಭವಿಷ್ಯವೇ ಮುಗಿಯಿತು ಎಂದು ಅಣಕವಾಡಿದವರಿಗೆ ವಿಧಾನ ಪರಿಷತ್ತ ಸದಸ್ಯರಾಗುವುದರ ಮೂಲಕ ಉತ್ತರಿಸಿದ್ದಾರೆ. ಅವರ ೧೭ ವರ್ಷದ ರಾಜಕೀಯ ವನವಾಸ ಕೊನೆಗೊಂಡಿದೆ. ಈಗ ಅವರು ಈ ಭಾಗದ ಅಭಿವೃದ್ದಿಯ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

    ಚೈತನ್ಯಶೀಲ, ಸೃಜನಶೀಲ, ಕ್ರೀಯಾಶೀಲ ಜನನಾಯಕರಲ್ಲಿ ಪಿ.ಎಚ್ ಪೂಜಾರ ಒಬ್ಬರು. ಹೀಗಾಗಿ ಅವರು ರಾಜಕೀಯ ಜನರಲ್ಲಿ ಭಿನ್ನರಾಗಿ ಕಾಣುತ್ತಾರೆ. ಸರಳ ಜೀವನ, ಉದಾತ್ತ ವಿಚಾರವನ್ನು ಬದುಕಿನುದ್ದಕ್ಕೂ ಪೂಜಾರವರು ರೂಢಿಸಿಕೊಂಡು ಬಂದಿದ್ದಾರೆ. ಅವರಲ್ಲಿ ಜನರನ್ನು ಹಚ್ಚಿಕೊಳ್ಳುವ ಮೆಚ್ಚಿಕೊಳ್ಳವ ಗುಣವಿದೆ. ಈ ವಿಶೇಷ ಗುಣ ಅವರನ್ನು ರಾಜಕೀಯದಲ್ಲಿ ಉಳಿಸಿತು, ಬೆಳೆಸಿತು. ಅವರು ತತ್ವಗಳಿಗೆ, ಆದರ್ಶಗಳಿಗೆ, ಉತ್ತಮ ಮೌಲ್ಯಗಳಿಗೆ ಬೆಲೆ ಕೊಡುವವರು, ಅಷ್ಟೇ ಅಲ್ಲ ಅವು ಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಯಶಸಿ ಯಾದವರು. ಮಾನವೀಯ ಅಂಶಗಳ ಅನುಷ್ಠಾನಕ್ಕೆ ಅವರು ಸದಾ ಸಿದ್ಧವೆಂಬುದನ್ನು ಅವರ ಬದುಕು ತೋರಿಸಿಕೊಟ್ಟಿದೆ. ಅವರ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸರಮಾಲೆಯಂತೆ ಬಂದವು. ಅವುಗಳಿಗೆ ಎಂದೂ ದೃತಿಗೆಡಲಿಲ್ಲ. ಅವರ ತಾಳ್ಮೆ ಮೆಚ್ಚುವಂತದ್ದು. ಪ್ರತಿಯೊಬ್ಬರಿಗೂ ಒಳ್ಳೆಯ ಸಮಯ ಬಂದೇ ಬರುತ್ತದೆ. ಅದು ಒಂದು ದಿನ ಅನುಕೂಲ ಮಾಡಿಕೊಡುತ್ತದೆ ಎಂಬ ಮಾತು ಪೂಜಾರ ಅವರ ಜೀವನದಲ್ಲಿ ಸತ್ಯವಾಯಿತು.

    ನೆಲ್ಸನ್ ಮಂಡೇಲಾ ಅವರು ೨೭ ವರ್ಷ ಶಿಕ್ಷೆ ಅನುಭವಿಸಿದರೂ ಅವರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ, ಮುಂದೆ ದಕ್ಷಿಣ ಆಪ್ರಿಕಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಜಗತ್ತೆ ನಿಬ್ಬೆರಗಾಗುವಂತೆ ಮಾಡಿದರು. ಅದರಂತೆ ಪಿ ಎಚ್ ಪೂಜಾರ ಅವರು ೧೭ ವರ್ಷ ರಾಜಕೀಯ ವನವಾಸ ಅನುಭವಿಸಿದರೂ ಅವರು ಎಂದೂ ಆತ್ಮ ವಿಶ್ವಾಸ ಕಲೆದುಕೊಳ್ಳಲಿಲ್ಲ, ವಿಧಾನ ಪರಿಷತ್ತ ಸದಸ್ಯರಾಗುವುದರ ಮೂಲಕ ಪುನಃ ರಾಜಕೀಯ ಅಧಿಕಾರ ಪಡೆದು ರಾಜ್ಯದ ಅಭಿಮಾನಿ ಜನ ಆಶ್ಚರ್ಯ ಪಡುವಂತೆ ಮಾಡಿದ್ದು ಒಂದು ಇತಿಹಾಸವೇ ಸರಿ. ಛಲ ಬಿಡದ ವಿಕ್ರಮನಂತೆ ಅವರು ಸಾಧಿಸಿ ತೋರಿಸಿದರು.

    ಬಾಗಲಕೋಟೆಯ ಮುಳುಗಡೆಯ ಜನರ ಬಗೆಗೆ ಅವರು ಅದಮ್ಯವಾದ ಆಸಕ್ತಿಯನ್ನು ಇರಿಸಿಕೊಂಡಿದ್ದಾರೆ. ಜನಪರ ಕಾಳಜಿ ಅವರಿಗೆ ರಕ್ತಗತವಾಗಿ ಬಂದಿದೆ. ಅವರ ಶಾಸಕತ್ವದ ಅವಧಿಯಲ್ಲಿ ಸಾಕಷ್ಟು ಮಹತ್ವದ ಕೆಲಸಗಳು ಆಗಿರುವುದಂತು ಸತ್ಯ. ಒಳಿತನ್ನು ಮಾಡುವ ಜನರಿಗೆ ವಿರೋಧಗಳು ಹೆಚ್ಚು ಎಂಬುದನ್ನು ಈ ಶತಮಾನದಲ್ಲಿ ಕಂಡುಕೊಂಡಿದ್ದೇವೆ. ಆದರೂ ಒಳ್ಳೆಯರು ಒಳ್ಳೆಯದನ್ನು ಮಾತ್ರ ಮಾಡುತ್ತಾರೆ ಎಂಬುದನ್ನು ಪೂಜಾರವರು ತೋರಿಸಿ ಕೊಟ್ಟಿದ್ದಾರೆ. ಅವರು ವಯೋವೃದ್ಧ ನಿರ್ಗತಿಕರಿಗೆ ಹಸಿವು ಇಂಗಿಸಲು ಬಾಗಲಕೋಟೆಯಲ್ಲಿ ಚಾರಟೇಬಲ್ ಟ್ರಸ್ಟ ಸ್ಥಾಪಿಸಿ ಕರುಣೆಯ ತುತ್ತು ಎನ್ನುವ ವಿನೂತನ ಯೋಜನೆ ರೂಪಿಸಿದರು. ಆ ಯೋಜನೆಯ ಮೂಲಕ ಆಯ್ಕೆಯಾದ ನಿರ್ಗತಿಕರ ಮನೆ ಬಾಗಿಲಿಗೆ ಊಟ ಕಳಿಸುವುದು ಪೂಜಾರವರ ಹೃದಯ ವೈಶಾಲ್ಯತೆಗೊಂದು ಉದಾಹರಣೆಯಾಗಿದೆ. ಗುಣದ ಹಿಂದೆ ಬೆನ್ನು ಹತ್ತದೆ ಹಣದ ಹಿಂದೆ ಬೆನ್ನು ಹತ್ತುವ ಇಂದಿನ ಕಾಲದಲ್ಲಿ ಪಿ.ಎಚ್ ಪೂಜಾರ ಅವರು ಅಪರೂಪ. ಅವರು ಪಾಲಿಸಿಕೊಂಡು ಬಂದ ಧರ್ಮ ಹಾಗೂ ಸಾತ್ವಿಕ ಗುಣ ಪೂಜಾರವರಿಗೆ ರಕ್ಷಾಕವಚವಾಗಿ ರಕ್ಷಿಸಿತು, ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿತು.

    ಶಿಕ್ಷಣದಿಂದಲೇ ಸಮಾಜದ ಹಾಗೂ ದೇಶದ ಉದ್ಧಾರ ಎಂಬುದನ್ನು ಬಲವಾಗಿ ನಂಬಿದ ಪಿ.ಎಚ್.ಪೂಜಾರವರು ಕಲಾದಗಿಯಲ್ಲಿ ಉರ್ದು ಪ್ರೌಡ ಶಾಲೆ, ಬಿಟಿಡಿಎ, ತುಳಸಿಗೇರಿ, ಸೀಮಿಕೇರಿ, ಇಲಾಳ, ತಳಗಿಹಾಳ ಪುನರವಸತಿ ಕೇಂದ್ರಗಳಲ್ಲಿ ಸರಕಾರದಿಂದ ಪ್ರೌಡಶಾಲೆಗಳನ್ನು ಮಂಜೂರು ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರಿಂದ ಅಲ್ಲಿಯ ಮಕ್ಕಳ ಶಿಕ್ಷಣಕ್ಕೆ ಅನೂಕೂಲವಾಗಿರುವುದು ಪಿ.ಎಚ್.ಪೂಜಾರವರ ಪರಿಶ್ರಮದ ಫಲ. ಇದು ಶಿಕ್ಷಣದ ಬಗ್ಗೆ ಅವರಿಗಿರುವ ಕಳಕಳಿಯನ್ನು ತೋರಿಸುತ್ತದೆ.

    ಕೃಷಿಕ ಮನೆತನದಿಂದ ಬಂದ ಪಿ.ಎಚ್.ಪೂಜಾರವರು ಕೃಷಿಕರಂತೆ ಗಟ್ಟಿಗರು, ಎಂತಹ ಕಠಿಣ ಪ್ರಸಂಗ ಎದುರಾದರೂ ಧೈರ್ಯದಿಂದ ಎದುರಿಸುವ ಎದೆಗಾರಿಕೆ ಅವರದು. ಬಿ.ಎಸ್.ಸಿ. ಎಲ್.ಎಲ್.ಬಿ ಪದವೀಧರರಾದ ಪೂಜಾರವರು ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ಹನುಮಂತಪ್ಪ ಹಾಗೂ ಪದ್ಮಾವತಿ ಇವರ ಪುಣ್ಯ ಉದರದಲ್ಲಿ ದಿನಾಂಕ ೧೬/೦೭/೧೯೫೪ ರಂದು ಜನಿಸಿದರು. ಈಗ ಅವರಿಗೆ ೭೧ ವರ್ಷ ವಯಸ್ಸು, ಯುವಕರಲ್ಲಿ ಇರುವ ಹುರುಪು ಹುಮ್ಮಸ್ಸನ್ನು ಅವರಲ್ಲಿ ಕಾಣಬಹುದಾಗಿದೆ.

    ಸ್ನೇಹ, ಸೌಹಾರ್ದ ಸೌಜನ್ಯತೆ, ಸಂಸ್ಕಾರ, ಸಂಸ್ಕೃತಿ ಸಹೋದರ ಭಾವ ಹಾಗೂ ವಿನಮ್ರತೆಯಿಂದ ಸಮಾಜದ ಮನಸ್ಸನ್ನು ಗೆದ್ದ ಪಿ.ಎಚ್.ಪೂಜಾರವರಿಗೆ ಕೆಲಸ ಮಾಡುವ ಕಲೆ ಹಾಗೂ ಕೆಲಸ ಮಾಡಿಸುವ ಕಲೆ ಕರಗತವಾಗಿದೆ. ಬಿ.ಜೆ.ಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸಮಾಜಮುಖಿ ಕೆಲಸ ಮಾಡುತ್ತ ರಾಜಕೀಯದಲ್ಲಿ ಬೆಳೆದಿದ್ದಾರೆ. ಅವರು ಜನರನ್ನು ಜೋಡಿಸುವ ಸೇತುವೆ ಎನಿಸಿದ್ದಾರೆ. ಪಿ.ಎಚ್.ಪೂಜಾರವರು ಒಳ್ಳೆಯ ಕೆಲಸಗಾರರು, ಒಳ್ಳೆಯ ಮನುಷ್ಯ ಎನ್ನುವ ಸದ್ಭಾವನೆ ಬಹಳ ಜನರಲ್ಲಿ ಈಗಲೂ ಇದೆ. ಇದು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಮಹಾ ಶಕ್ತಿಯಾಯಿತು. ಮಾಡಿದ ಕೆಲಸಗಳು ಅತ್ಯಲ್ಪ ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಠಿವೆ ಎಂಬ ಅರಿವು ಅವರಿಗಿದೆ. ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂಬ ಅವರ ಹಂಬಲಕ್ಕೆ ಜನರ ಬೆಂಬಲ ಬೇಕು.

    ಪಿ.ಹೆಚ್.ಪೂಜಾರ ಅವರು ಮೂಲತ: ಶ್ರೀಮಂತ ಮನೆತನದಲ್ಲಿ ಹುಟ್ಟಿದವರು. ಅವರ ಪೂರ್ವಜರು ದಾನ, ಧರ್ಮ, ಪರೋಪಕಾರ ಪುಣ್ಯದಂತ ಪರಂಪರೆಯಲ್ಲಿ ಬೆಳೆದವರು. ಆ ಫಲ ಪಿ.ಹೆಚ್.ಪೂಜಾರ ಅವರಿಗೆ ಶಕ್ತಿಯಾಗಿ ನಿಂತಿದೆ. ಇದಕ್ಕೆ ನಿದರ್ಶನವೆಂಬಂತೆ ಪಿ.ಹೆಚ್.ಪೂಜಾರ ಅವರ ತಂದೆಯವರು ತುಳಸೀಗೇರಿಯ ಪ್ರಾಥಮಿಕ ಶಾಲೆಗೆ ಭೂ ದಾನ ಮಾಡಿದ್ದು ಅದೇ ಶಾಲೆಯಲ್ಲಿ ಪಿ.ಹೆಚ್.ಪೂಜಾರ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ.

    ೧೯೭೨ ರಲ್ಲಿ ಜನ ಸಂಘದ ಯುವ ಮೋರ್ಚಾದ ಕಾರ್ಯದರ್ಶಿಯಾಗುವುದರ ಮೂಲಕ ರಾಜಕೀಯ ಪ್ರವೇಶಿದ ಪಿ.ಎಚ್.ಪೂಜಾರವರು ಕಳೆದ ೫೩ ವರ್ಷಗಳಿಂದ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ಬಂದಿದ್ದಾರೆ. ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ, ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೂ ತಮ್ಮ ಸಾತ್ವಿಕತೆಯನ್ನು ಬಿಟ್ಟುಕೊಟ್ಟಿಲ್ಲ. ಒಳ್ಳೆಯದರ ಬಗ್ಗೆ ವಿಶ್ವಾಸವಿಟ್ಟು ಜನಸಾಮಾನ್ಯರ ಕೆಲಸಗಳನ್ನು ಮಾಡುವ ಅಪರೂಪದ ವ್ಯಕ್ತಿಯಾಗಿದ್ದಾರೆ.

    ಎರಡು ಸಲ ಬಾಗಲಕೋಟೆಯ ಶಾಸಕರಾಗಿ ಹೋರಾಟದ ಮೂಲಕ ಜನಪರ ಕೆಲಸ ಮಾಡಿದ್ದು ಸದಾ ಸ್ಮರಣೀಯ. ಬಾಗಲಕೋಟೆಯ ಇತಿಹಾಸದಲ್ಲಿ ಮತಕ್ಷೇತ್ರದ ಹಾಗೂ ಮುಳಗಡೆಯ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕ ಎಂಬ ಹೆಗ್ಗಳಿಕೆ ಪಿ.ಎಚ್.ಪೂಜಾರ ಅವರಿಗೆ ಇದೆ. ಇದರಿಂದ ಅವರ ಶಾಸಕತ್ವ ಅವಧಿಯಲ್ಲಿ ಮತ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಆಗಿರುವುದನ್ನು ಜನ ಈಗಲೂ ಸ್ಮರಿಸುತ್ತಾರೆ. ಈಗ ವಿಧಾನ ಪರಿಷತ್ತ ಸದಸ್ಯರಾಗುವುದರ ಮೂಲಕ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಬಾಗಲಕೋಟೆ ನಗರ ಹಾಗೂ ಹಳ್ಳಿಗಳ ಮುಳುಗಡೆ ಪ್ರದೇಶದ ಅಭಿವೃದ್ಧಿಗಾಗಿ ಸರಕಾರ ೬೩೮ ಕೋಟಿ ಪ್ಯಾಕೇಜ ಹಣ ಪ್ರಕಟಿಸಬೇಕೆಂದು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರಿಗೆ ಒತ್ತಾಯಿಸಿದ ಪ್ರತಿಫಲವಾಗಿ ೧೩೦ ಕೋಟಿ ಹಣ ಬಿಡುಗಡೆಯಾಗಿ ಅಭಿವೃದ್ಧಿ ಕಾರ್ಯ ನಡೆದಿದ್ದು ಪಿ.ಎಚ್.ಪೂಜಾರವರ ಹೋರಾಟದ ಫಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಸರಕಾರ ಮುಳುಗಡೆಯ ವ್ಯಾಪ್ತಿಯನ್ನು ೫೨೧ ಮೀಟರಿಗೆ ಕೂನೆ ಹಾಡಿತ್ತು, ಅದನ್ನು ೫೨೩ ಮೀಟರವರೆಗೆ ಮುಂದುವರೆಸಿ ಕೆಲಸ ಪ್ರಾರಂಭಿಸುವಲ್ಲಿ ಪಿ.ಎಚ್.ಪೂಜಾರ ಪಾತ್ರ ಪ್ರಮುಖವೆನಿಸಿದೆ. ಅವರು ಮಾಡಿದ ಕೆಲಸಗಳು ಜನಮನದಲ್ಲಿ ಉಳಿದಿವೆ.

    ಪಿ.ಎಚ್.ಪೂಜಾರವರು ರಚನಾತ್ಮಕ ಕೆಲಸ ಮಾಡುವುದನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಬಂದಿದ್ದಾರೆ. ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿ ದವರ, ರೈತರ, ಕೃಷಿ ಕಾರ್ಮಿಕರ, ಮಹಿಳೆಯರ ಏಳ್ಗೆಗಾಗಿ ದುಡಿಯುತ್ತಾ ಬಂದಿದ್ದಾರೆ. ಸರಕಾರದ ಯೋಜನೆಗಳು ಜನಸಾಮಾನ್ಯರ ಮನೆಬಾಗಿಲಿಗೆ ಮುಟ್ಟುವಲ್ಲಿ ಸಹಕರಿಸಿದ ಎಲ್ಲ ಅಭಿಮಾನಿಗಳನ್ನು ಧನ್ಯತೆಯಿಂದ ಸ್ಮರಿಸುತ್ತಿರುವುದು ಪಿ.ಎಚ್.ಪೂಜಾರವರ ಹಿರಿಯ ಗುಣ. ಅವರ ಜೀವನ ಸುಖ, ಶಾಂತಿ, ಸಂತೋಷ, ಸಮೃದ್ದಿಯಿಂದ ಕೂಡಿರಲಿ ಎಂದು ಈ ಶುಭ ಸಂದರ್ಭದಲ್ಲಿ ಅವರ ಅಭಿಮಾನಿ ಗಳೆಲ್ಲರ ಹಾರೈಕೆಯಾಗಿದೆ.

    • ಅನೀಲಕುಮಾರ ಜಕ್ಕನಗೌಡ್ರ, ಬಾಗಲಕೋಟೆ

    Share. WhatsApp Facebook Twitter Pinterest LinkedIn Telegram Reddit Email Copy Link

    Related Posts

    October 10, 2025 ಬಾಗಲಕೋಟೆ

    ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ವರದಾನ: ಶಾಸಕ ಮೇಟಿ

    October 10, 2025 ಬಾಗಲಕೋಟೆ

    ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ

    October 10, 2025 ಬಾಗಲಕೋಟೆ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ: ಶಾಂತಗೌಡ ಪಾಟೀಲ

    October 10, 2025 ಬಾಗಲಕೋಟೆ

    ನ್ಯಾಯಾಧೀಶರ ಮೇಲೆ ಶೂ ಎಸೆತ ; ಕಾಂಗ್ರೆಸ್ ಪ್ರತಿಭಟನೆ

    October 9, 2025 ಬಾಗಲಕೋಟೆ

    ಅನುಚಿತ ವರ್ತನೆ ಮಾಡಿರುವ ವಕೀಲನ ಬಂಧನಕ್ಕೆ ಆಗ್ರಹ

    October 9, 2025 ಬಾಗಲಕೋಟೆ

    ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಲು ಸಿಎಂ ಕೊಡುಗೆ ಶೂನ್ಯ

    Facebook YouTube X (Twitter) Instagram
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092
    Privacy Policy | Terms and Conditions | Disclaimer | Affiliate Disclosure | About Us | Contact Us

    Type above and press Enter to search. Press Esc to cancel.