ಬಾಗಲಕೋಟೆ: ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕಾದರೆ ಬ್ರ್ಯಾಂಡ್ ಅಗತ್ಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ತೋಟಗಾರಿಕೆ ವಿವಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ, ತೋಟಗಾರಿಕೆ, ಕೆಪೆಕ್ ಮತ್ತು ತೋಟಗಾರಿಕೆ ವಿವಿಯ ಸಹಯೋದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನ-ಸಂವಾದ ಹಾಗೂ ಸಿರಿಧಾನ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತ ಕಷ್ಟಪಟ್ಟು ಬೆಳೆಯನ್ನು ಬೆಳೆಯುತ್ತಾನೆ ಬೆಳೆ ಬಂದ ಮೇಲೆ ಉತ್ತಮ ಬೆಲೆ ಸಹ ಸಿಗುವುದಿಲ್ಲ. ಇದರಿಂದ ರೈತ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆಧುನಿಕ ಜಗತ್ತಿಗೆ ತಕ್ಕಂತೆ ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ಕೊಟ್ಟು ಮಾರುಕಟ್ಟೆಗೆ ತಂದಲ್ಲಿ ಉತ್ತಮ ಬೆಲೆ ಸಿಗುತ್ತಿದೆ ಎಂದರು.
ಕೃಷಿಯಿಂದ ಯುವಕರು ಬಹಳಷ್ಟು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಕಾರಣ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುವದಿಲ್ಲ. ಅದನ್ನು ಯಾವ ರೀತಿಯಲ್ಲಿ ಹೋಗಲಾಡಿಸಬೇಕು. ಉತ್ಪಾದನಾ ಕೇಂದ್ರಗಳು ಹೆಚ್ಚಿಗೆ ಆಗಬೇಕು. ಹುನಗುಂದ ತಾಲೂಕಿನ ಎಫ್‌ಪಿಓ ೮೦ ಕೋಟಿ ರೂ.ಗಳ ವಹಿವಾಟು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಎಫ್‌ಪಿಓಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಇಲ್ಲಿಯ ಬೆಳೆ ಹೆಚ್ಚಿನ ಉತ್ಪನ್ನಗಳು ರಪ್ತು ಆಗಬೇಕು. ಅದಕ್ಕಾರಿ ಮಾರುಕಟ್ಟೆಗಳು ನಿರ್ಮಾಣವಾಗಬೇಕು ಎಂದರು. ಇಂತಹದೊಂದು ಸಮ್ಮೇಳನ ರೈತರಿಗೆ ಅನುಕೂಲವಾಗಲಿದೆ ಎಂದರು.

ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಮದ್ಯವರ್ತಿಗಳಿಂದ ನಲುಗಿ ಹೋಗುತ್ತಿದ್ದಾರೆ. ಕೃಷಿ, ತೋಟಗಾರಿಕೆ ಬೆಳೆಗಳನ್ನು ಆಸಕ್ತಿಯಿಂದ ಬೆಳೆಯುತ್ತಾರೆ. ಬೆಳೆದ ಉತ್ಪನ್ನಗಳಿಗೆ ಒಳ್ಳೇಯ ಬೆಳೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ, ತೋಟವಿವಿಯು ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಆಗಬೇಕು. ಅಂದಾಗ ರೈತ ಆರ್ಥಿಕವಾಗಿ ಬಲಿಷ್ಟರಾಗಲು ಸಾಧ್ಯವಾಗುತ್ತದೆ. ಅಲ್ಲದೇ ಇಂದಿನ ಬೆಳೆಗಳಲ್ಲಿ ಔಷಧಿಯ ಗುಣಗಳು ಹೆಚ್ಚಾಗುತ್ತಿವೆ. ಅಪ್ರಾಪ್ತ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ರೈತರು ಮೂಲ ಕೃಷಿ ಒಲಿಯಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ರೈತರ ಉತ್ಪನ್ನಗಳಿಗೆ ಪ್ರಚಾರ ಹೆಚ್ಚಾಗಬೇಕು. ಅಂದಾಗ ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಪ್ರಚಾರದಲ್ಲಿ ವಿಫಲರಾಗುತ್ತಿದ್ದೇವೆ. ರೈತರಿಗೆ ಯೋಗ್ಯವಾದ ಪ್ರತಿಫಲ ಸಿಗುತ್ತಿಲ್ಲ. ಬೆಳೆದ ಉತ್ಪನ್ನಗಳ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆಗಳು ಸಂಭವಿಸುತ್ತವೆ. ಇದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ ಎಂದು ತಳಿಸಿದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ರೈತರು ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿ ಸೂಕ್ತ ಬಹುಮಾನ ನೀಡಿದರೆ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಸಹ ಸರಕಾರ ಕೊಡಲಾಗುತ್ತದೆ. ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಕಾರಣಗಳನ್ನು ತಿಳಿದು ರೈತರನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ. ಜಿಲ್ಲೆಯ ಎಫ್‌ಪಿಓಗಳು ಮಧ್ಯಸ್ಥಿಕೆ ವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಒಡಂಬಡಿಕೆ ಆಗುವಂತೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಅವರು ಸಮ್ಮೇಳನ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪಡೆದ ೧೦ ಜನ ರೈತರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮ ಪೂರ್ವದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಹಾಪ್ ಕಾಮ್ಸ್‌ನ ಅಧ್ಯಕ್ಷ ಈರಪ್ಪ ಅರಕೇರಿ, ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ, ಲಾಲ್‌ಬಾಗನ ತೋಟಗಾರಿಕೆ ಅಪರ ನಿರ್ದೇಶಕ ಡಾ.ಪಿ.ಎಂ.ಸೊಬರದ, ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ, ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಶಿವಕುಮಾರ, ಬೆಳಗಾವಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಐ.ಕೆ.ದೊಡ್ಡಮನಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಉಪಸ್ಥಿತರಿದ್ದರು.
249.28 ಕೋಟಿ ರೂ.ಗಳ ಒಡಂಬಡಿಕೆ
ತೋಟಗಾರಿಕೆ ವಿವಿಯಲ್ಲಿ ನಡೆದ ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳದಲ್ಲಿ ರೈತರು ಮತ್ತು ಖರೀದಿದಾರರ ಜೊತೆ ಒಟ್ಟು 249.28 ಕೋಟಿ ರೂ.ಗಳ ಒಡಂಬಡಿಕೆ ನಡೆಯಿತು. ಅದರಲ್ಲಿ ಕೃಷಿಗೆ ಉತ್ಪನ್ನಗಳಿಗೆ 76.82 ಕೋಟಿ ರೂ. ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ 172.46 ಕೋಟಿ ರೂ.ಗಳಿಗೆ ಒಡಂಬಡಿಕೆ ನಡೆಯಿತು.