ಬಾಗಲಕೋಟೆ: ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರವು ಜುಲೈ ಕೊನೆಯ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ. ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ 5 ಸ್ಟುಡಿಯೋ ಮತ್ತು ಎಸಿಎಫ್ 22 ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ ಎಂದರು.
ಮಡಿಕೇರಿಯ ಮಣ್ಣಿನ ಕಥೆ ಇದಾಗಿದ್ದು, ಎರಡು ಪಾತ್ರಗಳ ನಡುವೆ ನಡೆಯುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ನಿರೂಪಿಸಲಾಗಿದೆ. ಸಾವಿನ ಮನೆಯಲ್ಲಿ ಡೋಲು ಹೊಡೆಯುವ ಕುಟುಂಬದ ಸುತ್ತ ಕಥೆ ಸಾಗುತ್ತದೆ. ‘ಮುತ್ತಾ’ನ ಕಥೆಯನ್ನು ನಿರೂಪಿಸುವ ‘ಎಲ್ಟು’ ಪಾತ್ರದಲ್ಲಿ ನಿರ್ದೇಶಕ ಸೂರ್ಯ ಅವರೇ ಕಾಣಿಸಿಕೊಂಡಿದ್ದಾರೆ. ಶೌರ್ಯಪ್ರತಾಪ್ ‘ಮುತ್ತಾ’ನ ಪಾತ್ರದಲ್ಲಿ ನಟಿಸಿದ್ದಾರೆ.
ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಎಲ್ಲರಿಗೂ ಮನಮುಟ್ಟುವಂತೆ ಹೆಣೆಯಲಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.
ನಿರ್ದೇಶಕ ಸೂರ್ಯ ಮಾತನಾಡಿ, ಈ ಚಿತ್ರ ನನ್ನ ಮೊದಲ ನಿರ್ದೇಶನವಾಗಿದೆ. ಮಡಿಕೇರಿ ಸುತ್ತಮುತ್ತ ಬಹುತೇಕ ಚಿತ್ರೀಕರಣವಾಗಿದ್ದು, ಕನಕಪುರದಲ್ಲಿಯೂ ಸಹ ಚಿತ್ರೀಕರಣ ನಡೆದಿದೆ ಎಂದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದ್ದು, ‘ಎಲ್ಟು ಮುತ್ತಾ’ ಚಿತ್ರದಲ್ಲಿ ಯುವ ನಟ-ನಟಿಯರು ನಟಿಸಿದ್ದಾರೆ. ಇನ್ನೊಬ್ಬ ನಾಯಕ ಶೌರ್ಯಪ್ರತಾಪ್ ಮಾತನಾಡಿ, “ನಾನು ಈ ಚಿತ್ರದಲ್ಲಿ ನಟ, ಸಹಾಯಕ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿದ್ದೇನೆ” ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ಪ್ರಸನ್ ಕೇಶವ್ ಚಿತ್ರದ ಐದು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇಯಪ್ಪ ಭಾಸ್ಕರ್ ಛಾಯಾಗ್ರಹಣ ನೀಡಿದ್ದು, ರೋಹನ್ ಆರ್ಯ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಿಯಾಂಕಾ ಮಲಾಲಿ ನಾಯಕಿಯಾಗಿ ನಟಿಸಿದ್ದಾರೆ.