ಬಾಗಲಕೋಟೆ: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ (ನಾರಾಯಣಗೌಡ ಬಣ) ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮಂಗಳವಾರ ಬೆಳಿಗ್ಗೆ ನವನಗರದ ಜಿಲ್ಲಾ ಡಳಿತ ಭವನ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪಠ್ಯದ ಕ್ರಮದಲ್ಲಿ ಸಾಧಾರಣವಾಗಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ, ದ್ವಿತೀಯ ಭಾಷೆಯಾಗಿ ಇಂಗ್ಲೀಷ, ತೃತೀಯ ಭಾಷೆಯನ್ನಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರ ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ಹಿಂದಿ ಭಾಷೆಯನ್ನು ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಒತ್ತಡವನ್ನು ಹೇರುತ್ತಿದೆ. ತ್ರಿಭಾಷಾ ಸೂತ್ರದ ಕುರಿತು ರಾಷ್ಟ್ರಕವಿ ಕುವೆಂಪು ಅವರು ತೀಕ್ಷ್ಮವಾದ ವಿರೋಧ ವ್ಯಕ್ತಪಡಿಸಿದ್ದರು. ತ್ರಿಭಾಷಾ ಸೂತ್ರದಿಂದ ನಮ್ಮ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಕನ್ನಡಿಗರಿಗೂ ಉದ್ಯೋಗ ದೊರೆತ್ತಿಲ್ಲ. ತಮಿಳುನಾಡು ಸರ್ಕಾರ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದೆ. ತೃತೀಯ ಭಾಷೆಯನ್ನು ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ ಭಾಷೆಯ ಜೊತೆಗೆ ಇತರ ವಿಷಯಗಳನ್ನು ಕೇಂದ್ರೀಕರಿಸಲು ಅನುಕೂಲವಾಗುತ್ತದೆ. ಕನ್ನಡದ ಭಾಷೆಗೆ ಆದ್ಯತೆ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಕಡ್ಡಾಯವಾಗಿ ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಹಿಂದಿಯನ್ನು ಪಠ್ಯಕ್ರಮದಿಂದ ತೆಗೆದು ಹಾಕಬೇಕು. ಸಿಬಿಎಸ್‌ಸಿ, ಐಸಿಎಸ್‌ಸಿ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಪ್ರಥಮ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ ಉತ್ತಮ ಗುಣಮಟ್ಟದ ಇಂಗ್ಲೀಷ ಶಿಕ್ಷಣವನ್ನು ನೀಡಬೇಕು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಗಣಪತಿ ಭೋವಿ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಅಂಬಿಗೇರ, ಉಪಾಧ್ಯಕ್ಷರಾದ ರಂಜಾನ್ ನದಾಫ, ರಾಮಜೀ ಘೋರ್ಪಡೆ, ಸಂಘಟನಾ ಕಾರ್ಯದರ್ಶಿ ಸಲೀಂ, ಕಾರ್ಯದರ್ಶಿ ವೀರಣ್ಣ ಬಡಿಗೇರ, ಜಿಲ್ಲಾ ಸಂಚಾಲಕ ಶಿವು ಲೆಂಕಣ್ಣವರ್, ಸಹ ಕಾರ್ಯದರ್ಶಿ ಶಿವು ಹೊಸಗೌಡರ, ಹುನಗುಂದ ತಾಲೂಕಾ ಅಧ್ಯಕ್ಷ ರೋಹಿತ ಬಾರಕೇರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.