ಬಾಗಲಕೋಟೆ: ಹುಬ್ಬಳ್ಳಿಯಿಂದ ಅಯೋಧ್ಯೆಗೆ ಸಂಚರಿಸಲಿರುವ ರೇಲ್ವೆ ಸೇವೆಯನ್ನು ವಾರಕ್ಕೆ ಮೂರು ದಿನಕ್ಕೆ ವಿಸ್ತರಿಸುವಂತೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಕೇಂದ್ರದ ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ನವೀಕರಣಗೊಂಡ ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜಾರ ಸಚಿವರಿಗೆ ಮನವಿ ನೀಡಿದ್ದು, ಈಗ ಹುಬ್ಬಳ್ಳಿಯಿಂದ ಅಯೋಧ್ಯೆಗೆ ಬಾಗಲಕೋಟೆ-ವಿಜಯಪುರ ಮೂಲಕ ವಾರಕ್ಕೆ ಒಂದು ಬಾರಿ ಸಂಚರಿಸುವ ರೇಲ್ವೆ ಸೇವೆಯನ್ನು ವಾರಕ್ಕೆ ಮೂರು ದಿನ ಒದಗಿಸಬೇಕು ಎಂದಿದ್ದಾರೆ.
ವಿಜಯಪುರ-ಬಾಗಲಕೋಟೆ-ಗದಗ ಮೂಲಕ ಈ ಭಾಗದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವುದರಿಂದ ನಿತ್ಯ ರಾತ್ರಿ ೮ ಗಂಟೆಗೆ ವಿಜಯಪುರದಿಂದ ಸೂಪರಫಾಸ್ಟ್ ರೇಲ್ವೆ ಸೇವೆ ಒದಗಿಸಬೇಕು. ಗುಜರಾತ, ರಾಜಸ್ಥಾನ ರಾಜ್ಯಕ್ಕೆ ಸಂಪರ್ಕಿಸುವ ರೇಲ್ವೆ ಸೇವೆ ಪ್ರಾರಂಭಿಸಬೇಕು. ಬೆಂಗಳೂರು-ಹುಬ್ಬಳಿ ನಡುವೆ ಓಡುವ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲನ್ನು ಬಾಗಲಕೋಟೆವರೆಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.
ನಿತ್ಯ ಬಾಗಲಕೋಟೆ ಮೂಲಕ ಬೆಂಗಳೂರಿಗೆ ಓಡುವ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ೧ಎಸಿ ಹಾಗೂ ೨ಎಸಿ ಬೋಗಿಗಳನ್ನು ಪ್ರತ್ಯೇಕ ಒದಗಿಸಬೇಕು ಎಂದು ವಿಪ ಸದಸ್ಯ ಪಿ.ಎಚ್.ಪೂಜಾರ ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.