ಬೇವೂರು: ಅಭಿವೃದ್ಧಿಗೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲವೆಂದು ಅಪಪ್ರಚಾರವನ್ನು ಮಾಡುವವರಿಗೆ ಬಾಗಲಕೋಟ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿವೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.
ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ರಾಂಪುರ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ ಯಿಂದ ಅಚನೂರ ಕ್ರಾಸ್‌ದಿಂದ ಆಲಮಟ್ಟಿ ಡ್ಯಾಮ್ ಬಾರ್ಡರ್ ವರೆಗೆ ಅಂದಾಜು ಮೊತ್ತ ೨೭.೭೦ ಲಕ್ಷ ರೂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಮನೆ ಬಾಗಿಲಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ. ಇದನ್ನು ಕಂಡು ವಿಪಕ್ಷ ನಾಯಕರು ಹೊಟ್ಟೆ ಉರಿ ತಾಳಲಾರದೆ ಸರಕಾರದ ಬಳಿ ಹಣವೇ ಇಲ್ಲ. ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ಮೂಲಕ ನಮ್ಮ ಅಭಿವೃದ್ಧಿಗಳನ್ನು ತೋರಿಸುತ್ತೇವೆ ಎಂದ ಅವರು ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮತ್ತು ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತ ಎನ್ನುವುದು ಸಾಧ್ಯವಿಲ್ಲ.
ಪ್ರತಿ ಶಾಸಕರಿಗೆ ೫೦ ಮತ್ತು ೨೫ ಕೋಟಿ ರೂ ಅನುದಾನ ನೀಡಲಾಗುತ್ತಿದೆ. ಹಿಂದಿನ ಸರ್ಕಾರ ದಲ್ಲಿ ಬಾಕಿ ಉಳಿದ ಬಿಲ್ಲುಗಳನ್ನು ಕೊಡುವುದೇ ನಮ್ಮ ಸರ್ಕಾರಕ್ಕೆ ಮತ್ತೊಂದು ಹೊರೆಯಾಗಿದೆ ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಿಧಾನ ಗತಿ ಸಾಗುವುದಕ್ಕೆ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಪರಶುರಾಮ್ ಮಹಾರಾಜ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಶಾಸಕರು ಈಡೇರಿಸುವ ಪ್ರಯತ್ನದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರಕ್ಕೆ ವಿಶೇಷ ಅನುದಾನ ತರುವ ಪ್ರಯತ್ನ ನಡೆದಿದ್ದು ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂದರು.
ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಹಳ್ಳಿ ಮಾತನಾಡಿದರು. ಮುಖಂಡರಾದ ಉಮೇಶ ಮೇಟಿ, ರಮೇಶ ಆಕಳವಾಡಿ, ಮಲ್ಲಿಕಾರ್ಜುನ ಮೇಟಿ, ಎಸ್.ಎನ್. ರಾಂಪುರ, ಸಿ.ಎನ್.ಬಾಳಕ್‌ನವರ್, ಬಾಲಪ್ಪ ಗಣಿ, ನಾರಾಯಣ ಶಿಲ್ಪಿ, ಜಟ್ಟಪ್ಪ ಮಾದಾಪುರ, ಫಕೀರಪ್ಪ ಕೊನ್ನೂರ, ಪವನ್ ಗಗನದ, ಶಿವಪ್ಪ ಕಾಳಗಿ, ಮಲ್ಲು ದ್ಯಾವಣ್ಣನವರ್ ಇದ್ದರು.