ನಮ್ಮ ಭಾರತವು ವೈವಿಧ್ಯಮಯ ದೇಶವಾಗಿದೆ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಸಾಂಸ್ಕೃತಿಕವಾಗಿ ಬಹಳ ಮಹತ್ವವಿದೆ. ಮಣ್ಣೆತ್ತಿನ ಅಮಾವಾಸ್ಯೆ (ಜ್ಯೇಷಮಾಸ ಕೃಷಪಕ್ಷ ಅಮಾವಾಸ್ಯೆ) ಅದೇ ರೀತಿ ರೈತ ವರ್ಗಕ್ಕೆ ಹಲವಾರು ನೆಲಮೂಲ ಸಂಸ್ಕೃತಿ ಮತ್ತು ಪರಂಪರೆ ಹೊಂದಿರವ ಹಬ್ಬಗಳಿವೆ. ರೈತರ ಉಸಿರೆ ಮಣ್ಣು ಮತ್ತು ಎತ್ತುಗಳು (ಜಾನುವಾರುಗಳು), ಮಣ್ಣೆತ್ತಿನ ಅಮಾವಾಸ್ಯೆ ಸಾಮಾನ್ಯ ಜನರಿಗೆ ಮತ್ತು ರೈತಾಪಿ ವರ್ಗದವರಿಗೆ ವಿಶೇಷತೆಯ ಅಚ್ಚುಮೆಚ್ಚಿನ ಹಬ್ಬವಾಗಿದೆ. ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಮಾಡಿದ ಎತ್ತುಗಳಿಗೆ (ವೃಷಭ) ಅಲಂಕರಿಸಿ, ಹಬ್ಬವನ್ನು ಆಚರಿಸಲಾಗುವುದು. ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ, ಪೂಜೆ ಮಾಡುವ ಈ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿದೆ.
ಭೂಮಿಯಲ್ಲಿ ಹುಟ್ಟುವುದಾದರೆ ಭೂಮಿಯಲ್ಲಿ ಬೀಜ ಬಿತ್ತಲು, ಬಿತ್ತಿದ ಫಸಲು ಬಂದ ಮೇಲೆ ಧಾನ್ಯ ರೂಪದಿಂದ ನಾವು ಪಡೆಯಲು ಈ ಎತ್ತುಗಳ (ವೃಷಭಗಳ) ಸೇವೆ ಅತ್ಯಂತ ಅವಶ್ಯವಾಗಿದೆ. ವೃಷಭವು ಶಿವನ (ರುದ್ರದೇವರ) ವಾಹನವಾದ್ದರಿಂದ ಶಿವನು ನಂದೀಶನೆಂದೇ ಪ್ರಸಿದ್ಧನಾಗಿದ್ದಾನೆ. ಹೀಗೆ ಮಾನವನು ಎತ್ತುಗಳಿಗೆ ಅತ್ಯಂತ ಕೃತಜ್ಞನಾಗಿದ್ದಾನೆ. ಪಂಚಭೂತಗಳಿಂತ ನಿರ್ಮಿತವಾದ ಈ ದೇಹವು ಪಂಚಭೂತಗಳಲ್ಲಿ ಒಂದಾದ ಭೂಮಿಯ ಮಣ್ಣಿನ ಅಂಶದಿಂದ ಕೂಡಿದೆ. ಭೂದೇವಿಯ ಪೂಜೆಯೂ ಮಣ್ಣೆತ್ತಿನ ಪೂಜೆಯಲ್ಲಿ ಅಡಗಿದೆ. ಈ ದಿವಸ ವಿಶೇ? ಅಡುಗೆಯನ್ನು ಮಾಡಿ, ಮಣ್ಣಿನ ಎತ್ತುಗಳಿಗೆ ನೈವೇದ್ಯ ಸಲ್ಲಿಸಿ, ಭೋಜನ ಮಾಡುವುದು ರೂಢಿಯಿಂದ ಬೆಳೆದು ಬಂದಿದೆ.
ನಮ್ಮ ಕನ್ನಡ ನಾಡು ಮೊದಲೇ ಕೃಷಿ ಪ್ರಧಾನವಾಗಿರುವ ಶ್ರೀಗಂಧದ ನಾಡು. ಮುಂಗಾರು ಮಳೆ ಆರಂಭವಾದರೆ ರೈತರಿಗೆ ಹಬ್ಬದ ದಿನಗಳು ಆರಂಭವಾದಂತೆ. ಮುಂಗಾರು ಬೀತ್ತನೆಯ ಕಾರ್ಯ ಕೆಲಸ ಮುಗಿಯುತ್ತಿದ್ದಂತೆ ರೈತರು ತಮ್ಮ ಸಾಂಸ್ಕೃತಿಕ ಹಬ್ಬಗಳ ಆಚರಣೆ ಆರಂಭಿಸುತ್ತಾರೆ. ಸರಿಯಾಗಿ ಹದಿನೈದು ದಿನಗಳ ಹಿಂದೆ ಕಾರುಹುಣ್ಣಿಮೆಯಂದು ರೈತರು ದಿನನಿತ್ಯ ದುಡಿಯುವ ರೈತರ ಪಾಲಿನ ದೈವವೇ ಆಗಿರುವ ಎತ್ತುಗಳನ್ನು ಸಿಂಗರಿಸಿ, ಸಂಜೆ ಊರಲ್ಲಿ ಮೆರವಣಿಗೆ ಮಾಡಿ, ಸಿಹಿ ತಿನಿಸುಗಳನ್ನು ತಯಾರಿಸಿ ವಿಶಿ?ವಾಗಿ ಸಂಭ್ರಮದಿಂದ ಆಚರಿಸಿರುವ ಕಾರಹುಣ್ಣಿಮೆ ನಂತರ ಬರುವುದೇ ಈ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ. ನಮ್ಮ ರೈತ ಬಾಂಧವರು ಇದೀಗ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಗೆ ಸಿದ್ಧವಾಗಿದ್ದಾರೆ. ನಮ್ಮ ನಾಡಿನ ಅನ್ನದಾತರ ಭಕ್ತಿ, ಭಾವದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ ಎಂದು ಹೇಳುವರು.
ಉತ್ತರ ಕರ್ನಾಟಕದಲ್ಲಿಂದು ವಿಶೇಷವಾಗಿ ರೈತರ ಪರಂಪರೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭದೊಂದಿಗೆ ರೈತರು ಕೃಷಿ ಕಾರ್ಯಚಟುವಟಿಕೆಗಳೊಂದಿಗೆ ಪಾರಂಪರಿಕವಾಗಿ ಬಂದಿರುವ ನೆಲೆಮೂಲ ಸಂಸ್ಕೃತಿಯನ್ನು ಹೊಂದಿರುವ ಈ ಹಬ್ಬಗಳು ಪ್ರಾರಂಭವಾಗುತ್ತವೆ. ಒಂದೆಡೆ ಕೃಷಿಕರು ತಮ್ಮ ತಮ್ಮ ಮನೆಗಳಲ್ಲಿರುವ ಬಸವಣ್ಣನ ಸ್ವರೂಪಿಯಾದ ಎತ್ತುಗಳನ್ನು ಪೂಜಿಸಿದರೆ, ಈ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ನಗರ, ಪಟ್ಟಣದ ವಾಸಿಗಳಿಗೆ ಮಣ್ಣಿನ ಎತ್ತುಗಳನ್ನು ತಂದು ಪೂಜಿಸುವುದು ಪಾರಂಪರಿಕವಾಗಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳಬಹುದು. ಗ್ರಾಮೀಣ ಪರಿಸರದಲ್ಲಿ ರೈತರು ತಾವೇ ತಮ್ಮ ಹೊಲದಲ್ಲಿರುವ ಮಣ್ಣನ್ನು ತಂದು ಹದವಾಗಿ ಕಲಿಸಿ, ಅದರಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವ ಪರಂಪರೆಯನ್ನು ರೂಢಿಸಿಕೊಂಡು ಬಂದಿದ್ದಾರೆ.
ರೈತರ ಸ್ನೇಹಿತವಾಗಿರುವ ಎತ್ತುಗಳೆ ಅನ್ನದಾತರ ಜೀವದ ಸಂಗಾತಿಗಳಾಗಿವೆ. ರೈತರ ಕೃಷಿ ಬದುಕಿನಲ್ಲಿ ಅವರ ಜೀವನದಲ್ಲಿ ಆಧಾರ ಸ್ತಂಬವಾಗಿ ನಿಲ್ಲುವ, ಹೊಲದಲ್ಲಿ ರೈತರ ಬೆನ್ನೆಲುಬಾಗಿ ದುಡಿಯುವ ಎತ್ತುಗಳನ್ನು ಬಸವಣ್ಣನೆಂದೆ ನಂಬಿ ನಮ್ಮ ರೈತರು ಪೂಜಿಸಿಕೊಂಡು ಬಂದ ಪ್ರತೀತಿಯಾಗಿದೆ. ಕಾರ ಹುಣ್ಣಿಮೆಯಲ್ಲಿ ಈ ಬಸವಣ್ಣನನ್ನು ಸಿಂಗರಿಸಿ, ಮೆರವಣಿಗೆ ಮಾಡಿರುವ ರೈತರು, ಇದೀಗ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣಿನ ಎತ್ತುಗಳನ್ನು ಎಂದರೆ ಮಣ್ಣಿನ ಬಸವಣ್ಣನನ್ನು ಮನೆಗೆ ತಂದು ಪೂಜಿಸುತ್ತಾರೆ. ಇದರೊಂದಿಗೆ ತಮ್ಮ ಮನೆಯ ಆಧಾರ ಸ್ಥಂಬವಾಗಿರುವ ನೈಜ ಎತ್ತುಗಳಿಗೂ ಕೂಡ ಅಲಂಕಾರ ಮಾಡಿ, ಭಕ್ತಿಯಿಂದ ಪೂಜಿಸುವ ಪರಂಪರೆಯು ರೈತರದ್ದಾಗಿದೆ.
ಇಂದಿನ ತಂತ್ರಜ್ಞಾನ ಯುಗದಲ್ಲಿರುವ ಯುವ ಸಮೂಹವು ಅತೀಯಾದ ಮೊಬೈಲ್ ಬಳಕೆಯಿಂದಾಗಿ ನಮ್ಮ ಕೃಷಿ ಮೂಲಗಳಿಂದ ಬಂದಿರುವ ಹಬ್ಬಗಳ ಸಂಭ್ರಮ, ಸಡಗರ ಪರಂಪರೆಯಿಂದ ದೂರು ಸರಿಯುತ್ತಿವೆ. ವಾಸ್ತವವಾಗಿ ಮಣ್ಣಿನ ಒಲೆಗಳು, ಮಣ್ಣಿನ ಹೂಜಿಗಳು, ಗಡಿಗೆಗಳಿಗೆ ಬೇಡಿಕೆ ಕುಸಿದಿದ್ದು ಸತ್ಯ, ಇಂದು ಇವುಗಳ ಮಾರಾಟವೂ ಕ್ಷೀಣಿಸಿದೆ. ಇದರಿಂದಾಗಿ ಕುಂಬಾರ ಸಮುದಾಯದ ಆದಾಯ ಕಡಿಮೆಯಾಗಿದೆ. ದೇಶಿಯ ಹಬ್ಬಗಳಿಗೆ ಸಂಬಂಧಿಸಿದ ಹಾಗೆ ಪರಿಸರಕ್ಕೆ ಪೂರಕವಾದ ಮಣ್ಣಿನಿಂದ ಮಾಡಿರುವ ಮೂರ್ತಿಗಳು ಪೂಜೆಗೆ ಸರ್ವಶ್ರೇಷ್ಠ ಎಂದು ನಮ್ಮ ಹಿರಿಯ ಹೇಳಿದ್ದಾರೆ. ಈ ಮೊದಲು ಗ್ರಾಮೀಣ ಪರಿಸರದಲ್ಲಿ ಹಬ್ಬಗಳನ್ನು ಆಚರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು. ಮನೆ ಮಂದಿ ಎಲ್ಲ ಸೇರಿ, ಹಬ್ಬದ ಆಚರಣೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬದ ಸಂಭ್ರಮ ಕೇವಲ ಸಂಪ್ರದಾಯ ಆಚರಣೆಗೆ ಮಾತ್ರ ಸೀಮಿತವಾಗಿ ಉಳಿದಿದೆ.
ಮೊದ್ಲ ಮನ್ಯಾಗ ಸಾಕ? ಮಂದಿ ಇರತಿದ್ರು. ಹಬ್ಬ ಎಲ್ಲಾರೂ ಕೂಡಿ ಮಾಡತಿದ್ರು. ಆದ್ರೆ ಈಗೇನ ಮಾಡುದ್ರಿ, ಮನ್ಯಾಗ ಮಕ್ಕಳನ ಸಾಲಿಗೆ ಕಳಸಬೇಕು. ನಾವ ನೌಕರಿಗೆ ಹೋಗಬೇಕು. ಅಂಥಾದ್ರಾಗ ಹಬ್ಬ ಮಾಡಾಕ ಎಲ್ಲಿ ಟೈಮ್ ಸಿಗತೈತಿ. ಬೆಳಿಗ್ಗೆ ಪೂಜಾ ಮಾಡಿ, ಕೈ ಮುಗದ್ರ ಮುಗೀತಪ ಹಬ್ಬ ಎನ್ನುವುದು ಇಂದಿನ ಸಮುದಾಯಗಳ ಚಿಂತನೆ ಆಗಿದೆ.
ಈ ದಿನ ರೈತರು ತಮ್ಮ ಹೊಲಕ್ಕೆ ಹೋಗಿ, ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ, ಪೂಜಿಸಲಾಗುವುದು. ನಂತರ ಎತ್ತುಗಳಿಗೆ ಹೋಳಿಗೆ, ಸಿಹಿ ಕಡಬು ಇಟ್ಟು ಸಮರ್ಪಿಸಲಾಗುತ್ತದೆ. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ಸಂಪ್ರದಾಯವಿದೆ. ಜೊತೆಗೆ ಈ ಮೂಲಕ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು. ಮಣ್ಣಿನಿಂದ ಮಾಡಿದ ಗಣಪತಿ, ನಾಗಪ್ಪನ ನಾವು ಗಣೇಶ ಚತುರ್ಥಿ ಮತ್ತು ನಾಗರಚೌತಿ ದಿನ ಪೂಜಿಸುವಂತೆ ರೈತರು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜೆ ಮಾಡುವ ಮೂಲಕ ಆಚರಿಸುತ್ತಾರೆ.
ಉತ್ತರ ಕರ್ನಾಟಕ ಮತ್ತು ನಾಡಿನಾದ್ಯಂತ ಇಂದಿನಿಂದ ಮುಂದೆ ಬರುವ ಹಬ್ಬಗಳು ವಿಶೇಷವಾಗಿ ಮಣ್ಣಿನಿಂದಲೆ ತಯಾರಿಸಿದ ಹಬ್ಬಗಳಾಗಿವೆ. ನಾಗರಪಂಚಮಿಯಂದು ನಾಗಪ್ಪ, ಗೌರಿ ಹುಣ್ಣಿಮೆಯಂದು ಗೌರಿ, ಗಣೇಶ ಚೌತಿಯಂದು ಗಣಪತಿ ಹೀಗೆ ಮಣ್ಣಿನ ಮೂರ್ತಿಗಳನ್ನೇ ಆರಾಧಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಈ ಪವಿತ್ರವಾದ ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಭಕ್ತಿಯಿಂದ ಪೂಜೆಯಲ್ಲಿ ತೊಡಗಿರುವ ಎಲ್ಲ ಸಮಸ್ತ ನಾಗರಿಕರಿಗೆ, ವಿಶೇಷವಾಗಿ ರೈತರಿಗೆ ಒಳ್ಳೆಯದಾಗಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಲೇಖನ ಸಂಗ್ರಹ
ಡಾ.ಚಂದ್ರಶೇಖರ ಮುತ್ತಪ್ಪ ಕಾಳನ್ನವರ
ರೈತರು ಮತ್ತು ಕನ್ನಡ ಉಪನ್ಯಾಸಕರು
ತೆಗ್ಗಿ, ಗುಳೇದಗುಡ್ಡ ತಾಲೂಕು