ಬಾಗಲಕೋಟೆ: ಬಾದಾಮಿ ತಾಲೂಕಿನ ಬೆಳ್ಳಿಖಂಡಿ ಗ್ರಾಮದ ತಿಪ್ಪೇಜಾಗೆಯ ವಿಷಯಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ಮಧ್ಯದ ಜಗಳದಲ್ಲಿ ಆಲ್ ಇಂಡಿಯಾ ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ವೈ.ಸಿ.ಕಾಂಬಳೆ ಸತ್ಯ ಸಂಗತಿಯನ್ನು ಮರೆಮಾಚಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಡಿಎಸ್‌ಎಸ್ ಬಾದಾಮಿ ತಾಲೂಕಾ ಸಂಚಾಲಕ ಶಿವುಕುಮಾರ ಪೂಜಾರ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೆಯ ವಿಷಯದಲ್ಲಿ ಮೂಗು ತೂರಿಸಿ ಭೀಮಪ್ಪ ಮೇಟಿ ಪರವಾಗಿ ನಿಂತು ಕೆರೂರ ಪಿಎಸ್‌ಐ ಭೀಮಪ್ಪನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ತಮ್ಮ ವೈಯಕ್ತಿಕ ದ್ವೇಷವನ್ನು ಸಾಧಿಸುವ ಹುನ್ನಾರ ಮಾಡಿದ್ದಾರೆ ಎಂದರು.
ಮುಖಂಡ ರಂಗಪ್ಪ ಮುಳ್ಳೂರ ಮಾತನಾಡಿ, ತಿಪ್ಪೆಯ ಜಾಗೆ ಅಧಿಕೃತವಾಗಿ ಶಿವಾನಂದ ವಗ್ಗರ ಹಾಗೂ ಪಡಿಯಪ್ಪ ವಗ್ಗರಗೆ ಸಂಬಂಧಿಸಿದ್ದರೂ ಇದಕ್ಕೆ ಗ್ರಾಪಂ ಸದಸ್ಯ ಭೀಮಪ್ಪ ಮೇಟಿ ಅಡಚಣೆಯುಂಟು ಮಾಡುತ್ತಿದ್ದಾರೆ. ಎಲ್ಲ ದಾಖಲೆಗಳಿದ್ದರೂ ದಬ್ಬಾಳಿಕೆಯಿಂದ ತಮ್ಮದೆಂದು ಹೇಳಿ ಅನ್ಯಾಯ ಮಾಡುತ್ತಿದ್ದಾರೆ. ನಿಜವಾದ ಮಾಲಿಕರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಮುತ್ತಣ್ಣ ಗಾಜಿ, ದೇವರಾಜ ಚೂರಿ, ಶಿವಾನಂದ ವಗ್ಗರ, ಪಡಿಯಪ್ಪ ವಗ್ಗರ, ಮಾರುತಿ ದಾನಿ ಸುದ್ದಿಗೋಷ್ಠಿಯಲ್ಲಿದ್ದರು.