ಬಾಗಲಕೋಟೆ ; ಮನಸ್ಸಿಗೆ ಉಲ್ಲಾಸ ತರುವ ಹಾಗೂ ಸ್ಪೂರ್ತಿದಾಯಕವಾದ ಕ್ರೀಡಾ ಚಟುವಟಿಕೆಗಳು ಬದುಕಿಗೆ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ವಾರ್ಷಿಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪೊಲೀಸ್ ಆಗಿರಬಹುದು, ಸಾಮಾನ್ಯ ವ್ಯಕ್ತಿಗಳಾಗಿರಬಹುದು ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾತ್ರ ನಮಗೆ ನಾವೆ ಕಂಡುಕೊಳ್ಳುತ್ತೀವಿ. ಅದೇ ನಮಗೆ ಸಿಗುವ ಉತ್ತಮ ಉಡುಗೊರೆ. ನಾವುದೇ ಆಟ ಆಡಿದಾಗ, ಹವ್ಯಾಸಗಳಲ್ಲಿ ತೊಡಗಿದಾಗ ಅದು ಸಂತೋಷ, ಸಮಾಧಾನ ಸಿಗುತ್ತದೆ ಎಂದು ತಿಳಿಸಿದರು.
ಎಲ್ಲ ಕ್ರೀಡೆಗಳಲ್ಲಿ ಪರಿಪೂರ್ಣವಾಗಿ ತೊಡಗಿಕೊಳ್ಳಲು ಆಗದಿದ್ದರೂ ನಮಗೆ ಹೊಂದಿಕೊಳ್ಳುವ ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾತ್ರ ವ್ಯಯಕ್ತಿಕ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾದ್ಯವಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಬೇರೆಯವರಿಗೆ ಸ್ಪೂರ್ತಿ ಆಗುತ್ತದೆ. ಪ್ರತಿದಿನ ಊಟ, ನಿದ್ರೆ ಮಾಡುವ ಹಾಗೆ ಇಂತಹದೊಂದು ವಿಶೇಷ ಕ್ರೀಡಾ ಚಟುವಟಿಕೆಗಳು ಮುಖ್ಯವಾಗಿವೆ ಎಂದರು.
ನಮ್ಮೆಲ್ಲ ಕ್ರಿಯೆಗಳು, ಕಾರ್ಯಚಟುವಟಿಕೆಗಳು ಬೇರಯವರನ್ನು ಉದ್ದೇಶಿಸಿದ್ದಾಗಿರುತ್ತೆ. ನಮ್ಮ ಕುಟುಂಬದಲ್ಲಿ ಆಗಿರಬಹುದು, ಹೊರಗಡೆ ತೋರಿಸುವ ಕಲೆ ಆಗಿರಬಹುದು ಬೇರೆಯವರಿಗೆ ಮಾಡುತ್ತೇವೆ. ಬೇರೆಯವರಿಗೂ ಮಾಡುವ ಕೂಡಾ ನಮ್ಮ ಬದುಕಿನ ಮುಖ್ಯ ಅಂಶವಾಗಿದೆ. ಇದನ್ನು ಮಾಡಲು ನಮಗೆ ಶಕ್ತಿ, ಉಲ್ಲಾಸ ಹಾಗೂ ಶಕ್ತಿ ಬೇಕಾಗುತ್ತದೆ. ನಮಗೆ ನಾವೇ ಸ್ಪೂರ್ತಿ ಹೊಂದಲು ಶಕ್ತಿ ತುಂಬಿಕೊಳ್ಳಲು ಇಂತಹ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರೀಡಾಕೂಟ ಆಯೋಜಿಸುವ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಸಹಕಾರಿಯಾಗಲಿವೆ. ನಿರಂತರ ಒತ್ತಡಗಳ ಮದ್ಯ ಇಂತಹ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ ಹಾಗೂ ಉಲ್ಲಾಸ ನೀಡುತ್ತವೆ. ಹಾಗಾಗಿ ಅಧಿಕಾರಿಗಳು ತಮ್ಮ ಒತ್ತಡದ ಮದ್ಯೆಯು ಕ್ರೀಡೆಗಳಿಗೆ ಆದ್ಯತೆ ನೀಡಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.