ಬಾಗಲಕೋಟೆ : ಜಿಲ್ಲೆಯ ವಿವಿಧ ತಾಲೂಕಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ 2017ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 172 ವಿವಿಧ ಹುದ್ದೆಯ ಸಿಬ್ಬಂದಿಗಳ ನೇಮಕಾತಿ ಪ್ರಸ್ತಾವನೆಗೆ ಅನುಮೋದನೆ ನೀಡಿದ ಆದೇಶ ಪತ್ರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಗುರುವಾರ ವಿತರಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜರುಗಿದ ಸಿಬ್ಬಂದಿ ನೇಮಕಾತಿ ಪ್ರಸ್ತಾವನೆಗೆ ನೀಡಿದ ಅನುಮೋದನೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದ ಅವರು ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ ನಿಮ್ಮ ಕಾರ್ಯವೈಖರಿ ಬಗ್ಗೆ ಸಲ್ಲಿಸಿದ ಪ್ರಸ್ತಾವನೆ ಪರಿಗಣಿಸಿ 172 ಸಿಬ್ಬಂದಿಗಳಿಗೆ ಅನುಮೋನೆ ನೀಡಲಾಗಿದೆ ಎಂದರು.
ನಿಯೋಜನೆಗೊಂಡ ಸಿಬ್ಬಂದಿಗಳೆಲ್ಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಿರಿ, ಮುಂದೆಯು ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿ ಪಂಚಾಯತಿ ಹೆಸರು ತರುವ ಕೆಲಸವಾಗಬೇಕು. ಗ್ರಾಮ ಪಂಚಾಯತ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕಾದರೆ, ಮುಖ್ಯವಾಗಿ ಜನರ ಹತ್ತಿರದಿಂದ ಕೆಲಸ ಮಾಡುವವ ಪಾತ್ರ ಬಹಳ ಮುಖ್ಯವಾಗಿದೆ. ಸರಕಾರದ ಆದೇಶದನ್ವಯ ಹೆಚ್ಚಿನ ಮುತುವರ್ಜಿ ವಹಿಸಿ ಅನುಮೋದನೆ ಪತ್ರ ನೀಡಲಾಗಿದೆ. ಮುಖ್ಯವಾಗಿ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸಮರ್ಪಕ ನಿರ್ವಹಣೆ ಕೆಲಸ ಆಗಬೇಕು ಎಂದರು.
ಮೇಲಾಧಿಕಾರಿಗಳಾದ ನಾವುಗಳು ಕೇವಲ ಆದೇಶ ಮಾಡಿ ನಿರ್ದೇಶನ ನೀಡುವ ಕೆಲಸ ಮಾಡುತ್ತೇವೆ. ಆದರೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಮಾಡುವ ಕೆಲಸದಲ್ಲಿ ಡಿ ಗ್ರೂಪ್ನವರು ಸಹಾಯಕರಾಗಿ ಕೆಲಸ ಮಾಡುತ್ತಿದ್ದೀರಿ. ಡಿ ಗ್ರೂಫ್ ಸಿಬ್ಬಂದಿಗಳಿಗೂ ಕರ್ತವ್ಯ ಮತ್ತು ಜವಾಬ್ದಾರಿ ಇದ್ದು, ಸಾರ್ವಜನಿರಿಗೆ ಹತ್ತಿರವಿರುವ ನಿಮ್ಮ ಪಾತ್ರ ಬಹಳ ಮುಖ್ಯವಾಗಿದೆ. ಕಾಲ ಕಾಲಕ್ಕೆ ಸರಕಾರದಿಂದ ಹೊಸ ಹೊಸ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾನಿಕವಾಗಿ ಕೆಲಸ ಮಾಡಲು ತಿಳಿಸಿದರು.
ಪಂಚಾಯತ ಅಭಿವೃಧ್ದಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ ಮಾತನಾಡಿ ಹಲವಾರು ವರ್ಷಗಳಿಂದ ಗ್ರಾ.ಪಂ ಸಿಬ್ಬಂದಿಗಳ ಕೋರಿಕೆ ಈಡೇರಿದ್ದು, ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಿರಿರುವುದು ರಾಜ್ಯದಲ್ಲಿ ಮೊದಲು ಎಂದರು. ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಮಾತನಾಡಿ 2017ರ ಪೂರ್ವದಲ್ಲಿ ವಿದ್ಯಾರ್ಹತೆ ಹೊಂದಿದ್ದರೂ ಜಿ.ಪಂಚಾಯತಿಯಿಂದ ಅನುಮೋದನೆ ಆಗದೇ ಸೇವೆ ಸಲಿಸುತ್ತಿರುವ ಸಿಬ್ಬಂದಿಗಳಿಗೆ ನೇಮಕಾತಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಇನ್ನು ಕೆಲವರು ಅನುಮೋದನೆ ಸಿಗದೆ ನಿವೃತ್ತಿ ಹೊಂದಿದ ಸಿಬ್ಬಂದಿಗಳು ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 172 ಜನ ಗ್ರಾ.ಪಂ ಸಿಬ್ಬಂದಿಗಳಿಗೆ ಅನುಮೋದನೆ ಆದೇಶ ಪತ್ರ ನೀಡಲಾಯಿತು. ನೇಮಕಾತಿ ಅನುಮೋದನೆಯಲ್ಲಿ ವಾಟರಮನ್, ಸ್ವೀಪರ್ ಸ್ವಚ್ಛತಾಗಾರ, ಕ್ಲರ್ಕ ಕಂ ಡಿಇಓ, ಸಿಪಾಯಿ, ಬಿಲ್ ಕಲೆಕ್ಟರ, ವಸೂಲಿ ಸಹಾಯಕ ಹುದ್ದೆಗಳ ನೇಮಕಾತಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಬಾಗಲಕೋಟೆ ತಾಲೂಕಿನ 16, ಬಾದಾಮಿ 14, ಇಳಕಲ್ಲ 18, ಹುನಗುಂದ 12, ಬೀಳಗಿ 23, ಗುಳೇದಗುಡ್ಡ 4, ಮುಧೋಳ 27, ಜಮಖಂಡಿ 42 ಹಾಗೂ ರಬಕವಿ-ಬನಹಟ್ಟಿ ತಾಲೂಕಿನ 16 ಸಿಬ್ಬಂದಿಗಳಿಗೆ ಅನುಮೋದನೆ ಆದೇಶ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಪುನಿತ್, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಸಹಾಯಕ ನಿರ್ದೇಶಕ ಎಸ್.ಎಂ.ಕಾಂಬಳೆ, ಗ್ರಾ.ಪಂ ಸಿಬ್ಬಂದಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರ ಮುದ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.