ಬಾಗಲಕೋಟೆ : ಮನುಕುಲಕ್ಕೆ ನಿಜವಾದ ಸಮಾಜಶಾಸ್ತ್ರ ತಿಳಿಸಿ ರಾಮಾಯಣ ಕಾವ್ಯ ರಚಿಸಿದ ಮಹರ್ಷಿಯವರು ರಾಮಾಯಣದ ಮಹಾ ಕೋಗಿಲೆಯಾಗಿದ್ದಾರೆಂದು ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಹಾಗೂ ಮಹರ್ಷಿ ವಾಲ್ಮೀಕಿ ಸಮಾಜ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಮಾಯಣ ಒಂದು ಮದುರ ನೀತಿ ಕಾವ್ಯವಾಗಿದ್ದು, ಒಂದು ಕುಟುಂಬದಲ್ಲಿ ಹೇಗಿರಬೇಕೆಂಬ ರೀತಿಯನ್ನು ತಿಳಿಸಿದೆ. ಇಂದು ರಾಮಾಯಣದಲ್ಲಿರುವ ಸಹೋದರತ್ವವನ್ನು ಎಲ್ಲರೂ ಪರಿಪಾಲಿಸಬೇಕಿದೆ ಎಂದರು.
ರಾಮಾಯಣದಂತಹ ಮಹಾ ಕೃತಿಯನ್ನು ರಚಿಸಿದ ವಾಲ್ಮೀಕಿ ಅನಕ್ಷರಸ್ತರಾಗಿದ್ದರೂ ರಾಮ ರಾಮ ಎಂಬ ಜಪಮಾಡಿ ರಾಮಾಯಣದಂತ ಮಹಾಕಾವ್ಯ ರಚಿಸಿ ವಿಶ್ವದಲ್ಲಿಯೇ ಪ್ರಪ್ರಥಮ ಆದಿಕವಿ ಆಗುವದಲ್ಲದೇ ರಾಮಾಯಣವನ್ನು ವಿಶ್ವದ ಪ್ರಥಮ ಕಾವ್ಯವನ್ನಾಗಿಸಿದವರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್..ವಾಯ್.ಮೇಟಿ ನ ವಾಲ್ಮೀಕಿ ಜಯಂತಿ ವಿಶೇಷವಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಪರಿಶಿಷ್ಟ ಪಂಗಡದ ವಸತಿ ಶಾಲೆ ಹಾಗೂ ರಾಯಚೂರಿನ ವಿಶ್ವ ವಿದ್ಯಾಲಯಕ್ಕೆ ವಾಲ್ಮೀಕಿ ಎಂಬ ಹೆಸರು ಇಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಮಾಯಣದ ಕಲ್ಪಣೆಯಲ್ಲಿ ಹುಟ್ಟು ಸಾವಿನ ಮಧ್ಯ ಸಾಧಿಸುವ ಸಾಧನೆ ಹಾಗೂ ಸಾಧಕರ ಬಗ್ಗೆ ಸಮಗ್ರವಾಗಿ ವಿವರ ನೀಡಿದ್ದು, ಯುವಕರು ರಾಮಾಯಣ ಕಾವ್ಯದಲ್ಲಿರುವ ಕುಟುಂಬದ ಒಗ್ಗಟ್ಟನ್ನು ಅರಿಯಬೇಕು ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಚರಿತ್ರೆ ಓದಲಾರದ ಚರಿತ್ರೆಯನ್ನು ನಿರ್ಮಿಸಲಾರ ಎಂಬ ಮಾತಿನಂತೆ ಇಂದು ಆಚರಿಸಲ್ಪಡುವ ವಾಲ್ಮೀಕಿ ಜಯಂತಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಕಂಡಾಗ ಚರಿತ್ರೆಗಳನ್ನು ನಿರ್ಮಿಸುವವರು ಎಂದರು. ಸಿದ್ದತೆ, ಸಂಶೋಧನೆ, ಪರಿಶ್ರಮ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಮಹರ್ಷಿ ವಾಲ್ಮೀಕಿ ಅಂತಹ ಸಾಧನೆ ಮಾಡಿದಲ್ಲೇ ರಾಮಾಯಣದಂತಹ ಮಹಾಕಾವ್ಯ ದೊರಕಿತು, ಅಂತಹ ಮಹಾನ ಕವಿಯ ತತ್ವಾದರ್ಶಗಳನ್ನು ಒಳವಡಿಸಿಕೊಳ್ಳಲು ಹೇಳಿದರು.
ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕಷಣ ನೀಡುವದರ ಜೊತೆಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಅಮೀನಗಡದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆರ್.ಜಿ.ಸನ್ನಿ ಮಾತನಾಡಿ ವಾಲ್ಮೀಕಿ ಕುಲಭಾಂದವರಾದ ನಮ್ಮ ಪೂರ್ವಜರು ಪ್ರಥಮ ಸ್ವಾತಂತ್ರ ಸಂಗ್ರಾಮವನ್ನು ಬಳ್ಳಾರಿಯಲ್ಲಿ ಭಾಗವಹಿಸಿದ್ದರಲ್ಲೇ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಬೇಡರು ಜಡಗನ್ನ ಬಾಲಣ್ಣ ಎಂಬುವರ ಮುಖಂಡತ್ವದಲ್ಲಿ ಹೋರಾಟ ಮಾಡಿದವರು. ಇಂತಹ ಸಮಾಜ ಇಂದು ಶಿಕ್ಷಣವಂತರಾಗಬೇಕು. ಸರಕಾರದಿಂದ ಬರುವ ಪ್ರತಿಯೊಂದು ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಾಮಾಜಕವಾಗಿ ಮುಂದು ಬರಲು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಪ್ರಗತಿ ಅರಹುಣಸಿಗೆ ಜಡಗನ್ನ ಬಾಲನ್ನ ಹೆಸರಿನಲ್ಲಿ ನೀಡಲಾಗುತ್ತಿರುವ 2 ಲಕ್ಷ ರೂ.ಗಳ ಚೆಕ್ ರೂಪದ ಬಹುಮಾನ ನೀಡಿ ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಸಮುದಾಯದ ಜಯಶ್ರೀ ತಳವಾರ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ರಾಧಿಕಾರ ಹೊಸಮನಿ, ಸ್ಪೂರ್ತಿ ತಳವಾರ, ಮೇಘಾ ಹೊಸಮನಿ, ಸಾಕ್ಷಿ ತಳವಾರ, ಕೃಷ್ಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾದ್ಯಕ್ಷೆ ಶೋಭಾ ರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ನಿವೃತ್ತ ನ್ಯಾಯಾಧೀಶ ಡಿ.ವೈ.ಬಸಾಪೂರ, ಸಮುದಾಯದ ಮುಖಂಡರಾದ ದ್ಯಾಮಣ್ಣ ಗಾಳಿ, ಶಂಬುಗೌಡ ಪಾಟೀಲ, ಮಹಾದೇವಪ್ಪ ತಳವಾರ, ಯಲ್ಲಪ್ಪ ಕ್ಯಾದಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸ್ವಾಗತಿಸಿದರು. ಸಂಜಯ ನಡುವಿನ ಮನಿ ಕಾರ್ಯಕ್ರಮ ನಿರೂಪಿಸಿದರು.