ಬಾಗಲಕೋಟೆ ; ಜಿಲ್ಲೆಯಾದ್ಯಂತ ನವೆಂಬರ ೧ ರಂದು ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೭.೩೦ಕ್ಕೆ ಜಿಲ್ಲಾಡಳಿತ ಭವನದ ಮುಂದೆ ಇರುವ ಅಶೋಕ ಸ್ಥಂಬದ ವೃತ್ತದಿಂದ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ನಾಡಿನ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಚಾಲುಕ್ಯರ ಪರಂಪರೆ ಹಾಗೂ ಕರ್ನಾಟಕ ವೈಭವ ಬಿಂಬಿಸುವಂತ ಸ್ಥಬ್ದ ಚಿತ್ರ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಯಿತು. ಕನ್ನಡ ಸಾಹಿತ್ಯ ಪರಂಪರೆಗೆ ಬಾಗಲಕೋಟೆ ಜಿಲ್ಲೆಯ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಕನ್ನಡ ನಾಡು ನುಡಿಯ ಕುರಿತು ಕನ್ನಡ ಗೀತೆಗಳ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆಗೆ ಕ್ರಮವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮ ಸಿದ್ದತೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರ ಕರ್ತವ್ಯಗಳ ಬಗ್ಗೆ ಸಭೆ ಕರೆದು ಕಾರ್ಯಕ್ರಮ ರೂಪು ರೇಶೆಗಳನ್ನು ತಯಾರಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಗೀತೆ, ನಾಡಗೀತೆ ಹಾಗೂ ಕುವೆಂಪು ವಿರಚಿತ ನೇಗಿಲಯೋಗಿ ಗೀತೆಯನ್ನು ಹಾಡಿಸುವ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಯಿತು.
ಜಿಲ್ಲಾ ಕ್ರೀಡಾಂಗಣ ಹಾಗೂ ಮೆರವಣಿಗೆ ಸ್ಥಳಗಳನ್ನು ಸ್ವಚ್ಛವಾಗಿಡಬೇಕು. ಶುದ್ದ ಕುಡಿಯುವ ನೀರು, ವೇದಿಕೆ, ವಿದ್ಯುತ್, ಧ್ವನಿವರ್ಧಗಳ ಹಾಗೂ ಜನರೇಟರ, ಆಸನಗಳ ವ್ಯವಸ್ಥೆಗಳ ಜೊತೆಗೆ ಪೋಲಿಸ್ ಬಂದೋಬಸ್ತಿ ವ್ಯವಸ್ಥೆ ಮಾಡಲು ತಿಳಿಸಿದರು. ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ, ಗಣ್ಯರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡುವದರ ಜೊತೆಗೆ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳಿಗೆ ಹಳೆ ಬಾಗಲಕೋಟೆಯಿಂದ ನವನಗರಕ್ಕೆ ಬಂದು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಲಾಯಿತು.
ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಯಿತು. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಜಿಲ್ಲೆಯಾದ್ಯಂತ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯಲ್ಲಿ ಶೇ.೬೦ ರಷ್ಟು ಸಮರ್ಪಕ ಕನ್ನಡ ಅನುಷ್ಠಾನ ಹಾಗೂ ಕನ್ನಡದಲ್ಲಿಯೇ ನಾಮಫಲಕ ಕಡ್ಡಾಯವಾಗಿ ಅಳವಡಿಕೆಗೆ ಕ್ರಮವಹಿಸುವಂತೆ ಕನ್ನಡಪರ ಸಂಘಟಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿ, ಕೊನೆಗೆ ವಂಧಿಸಿದರು.