ಬಾಗಲಕೋಟೆ ; ಸಾಲದ ಬಾಧೆ ತಾಳದೇ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಜಿಲ್ಲೆಯ ಇಳಕಲ್ಲ ತಾಲೂಕಿನ ಹಿರೇಕೊಡಗಲಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಬಾಯಿ ಜಯಣ್ಣ ಹವಾಲ್ದಾರ(೪೩)ಎಂಬ ಮಹಿಳೆಯೇ ನೇಣಿಗೆ ಶರಣಾಗಿದ್ದು, ತನಗಿರುವ ೪ ಹೆಣ್ಣು ಮಕ್ಕಳ ಮದುವೆಯ ಚಿಂತೆಯೂ ಅವಳನ್ನು ಕಾಡಿತ್ತು ಎನ್ನಲಾಗಿದೆ.
ಗಂಡ ಜಯಣ್ಣ ಮೃತಪಟ್ಟ ನಂತರ ಹೆಣ್ಣು ಮಕ್ಕಳ ಮದುವೆ ಮಾಡುವ ಚಿಂತೆಯಲ್ಲಿದ್ದ ಲಕ್ಷ್ಮೀಬಾಯಿ, ಅದಕ್ಕಾಗಿ ಅಲ್ಲಲ್ಲಿ ಸಾಲ ಪಡೆದಿದ್ದಳು ಎಂದು ಹೇಳಲಾಗಿದ್ದು, ಮಕ್ಕಳ ಮದುವೆಯೂ ಆಗದೇ, ಇತ್ತ ಸಾಲಗಾರರ ಕಿರಿಕಿರಿ ಉಂಟಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಇಳಕಲ್ಲ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಮಲ್ಲು ಸತ್ತಿಗೌಡರ ತನಿಖೆ ಕೈಗೊಂಡಿದ್ದಾರೆ. ಲಕ್ಷ್ಮೀಬಾಯಿ ಸಾವಿನಿಂದ ಆಕೆಯ ಮಕ್ಕಳ ಬಗ್ಗೆ ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ.