ಬಾಗಲಕೋಟೆ : ವಿಶೇಷ ಔಷಧಿ ಗುಣಗಳುಳ್ಳ ತರಕಾರಿಗಳತ್ತ ಜನ ವಾಲುತ್ತಿದ್ದು, ಇಂದು ಪ್ರತಿಯೊಬ್ಬರೂ ವಿವಿಧ ರೀತಿಯ ತರಕಾರಿಗಳಿಗೆ ಮಾರು ಹೋಗಿದ್ದಾರೆ. ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರದಿಂದ ಮುಖ್ಯ ಆವರಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ಕಾಲ ಸಸ್ಯ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ತರಕಾರಿ ಬೆಳೆಗಳಲ್ಲಿ ಗ್ರಾಹಕರಿಗೆ ಆಕರ್ಷಣೆವಾಗುವ ಉದ್ದೇಶದಿಂದ ವಿಷಕಾರಿ ಔಷಧಿ ಉಪಯೋಗಿಸುವುದು ವಾಡಿಕೆಯಾಗಿದೆ. ಜವಾರಿ ಎನಿಸಿಕೊಂಡ ಜೋಳ ಕೂಡಾ ಇಂದು ಕಲಬರಕೆಯಾಗತೊಡಗಿದೆ. ಈ ಎಲ್ಲವುಗಳಿಂದ ಮುಕ್ತಗೊಳಿಸಿ ಸಾವಯವ ಕೃಷಿಯೊಂದಿಗೆ ತರಕಾರಿ ಬೆಳೆದು ಬೇರೆ ರಾಷ್ಟ್ರಕ್ಕೆ ರಪ್ತು ಮಾಡಲು ಎಲ್ಲ ವ್ಯವಸ್ಥೆಗಳು ನಮ್ಮಲ್ಲಿ ಇದ್ದಾಗ ಆ ಕಡೆ ಹೆಚ್ಚು ಗಮನ ಹರಿಸದೇ ಇರುವುದ ವಿಷಾಧನೀಯ ಸಂಗತಿಯಾಗಿದೆ ಎಂದರು.
ರೈತರು ಬೆಳೆದ ತರಕಾರಿ ಬೆಳೆದ ಸ್ಥಳದಲ್ಲಿಯೇ ಅದರ ಬೆಲೆ ತೂಕ, ಗುಣಮಟ್ಟ ಪರೀಕ್ಷೆಗೆ ಒಳಪಟ್ಟು ಯೋಗ್ಯದರ ದೊರೆಯುವಂತಾಗಿ ಬೆಳೆದ ಬೆಳೆಗ ನೇರವಾಗಿ ರೈತರಿಗೆ ಹಣ ವರ್ಗಾವಣೆ ಆಗುವಂತ ವ್ಯವಸ್ಥೆ ಆಗಬೇಕಿದೆ. ರೈತರು ಕೂಡಾ ಉತೃಷ್ಟ ಹಾಗೂ ಸಾವಯವ ಕೃಷಿ ಪದ್ದತಿ ಬಳಸಿಕೊಂಡು ಕಲಬರಕೆ ರಹಿತ, ರಾಸಾಯನಿಕ ಬಳಸದ ತರಕಾರಿಗಳನ್ನು ಬೆಳೆಯಲು ಕರೆ ನೀಡಿದರು. ಅಲ್ಲದೇ ತೋಟಗಾರಿಕೆ ವಿಶ್ವವಿದ್ಯಾಲಯದ ಕಾರ್ಯ ಸಂತೃಪ್ತಿ ತಂದಿದ್ದು, ನಶಿಸಿ ಹೋಗುತ್ತಿರುವ ದೇಶಿ ತರಕಾರಿ ಹಾಗೂ ಹಣ್ಣುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ರಾಜ್ಯ ಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ ರಾಜ್ಯದಲ್ಲಿಯೇ ಪ್ರಥಮ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇದಾಗಿದ್ದು, ನಮ್ಮ ಭಾಗದ ರೈತರಿಗೆ ಉಪಯುಕ್ತವಾದ ಹಾಗೂ ವಿವಿಧ ತಳಿಗಳ ಸಂಶೋಧನೆಗಳೊಂದಿಗೆ ಮಾರ್ಗದರ್ಶನ ನೀಡುವ ಕಾರ್ಯವಾಗಬೇಕು ಎಂದರು.
ಪ್ರಾರಂಭದಲ್ಲಿ ತೋವಿವಿಯ ಕಿರಿಯ ಪ್ರಾದ್ಯಾಪಕ ಡಾ.ವಸಂತ ಗಾಣಗೇರ ಅವರು ಸಸ್ಯ ಸಂತೆಯ ಮಳಿಗೆಗಳಲ್ಲಿ ಇರುವ ಲಿಂಬೆ, ಸೀತಾಫಲ, ನೆಲ್ಲಿ, ಚಿಕ್ಕು, ಮಾವು, ಪೇರು, ನೇರಳೆ, ಹುಣಸೆ, ಡ್ರ್ಯಾಗನ್ ಹೂವಿನ ಸಸಿಗಳು, ಔಷಧಿಯ ಸಸಿಗಳು, ಅಂಜುರ, ಸಿತಾಫಲ ಸೇರಿದಂತೆ ವಿವಿಧ ತಳಿಯ ಸಸಿಗಳು, ವಿಶ್ವವಿದ್ಯಾಲಯದ ಉದ್ದೇಶಿತ ಜೈವಿಕ ಗೊಬ್ಬರಗಳು, ಪೀಡೆನಾಶಕಗಳು, ರೈತ ಉತ್ಪಾದಕ ಜೇನು ಕೃಷಿಯ ತುಪ್ಪಗಳ ಸೂಕ್ತ ಮಾಹಿತಿಯೊಂದಿಗೆ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ವಿಷ್ಣುವ ರ್ಧನ, ಸಂಶೋಧನ ನಿರ್ದೇಶಕ ಡಾ.ಎಚ್.ಪಿ.ಮಹೇಶ್ವರಪ್ಪ, ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀ ನಾರಾಯಣ ಹೆಗಡೆ, ಕುಲಸಚಿವರಾದ ಡಾ.ಟಿ.ಬಿ.ಅಳ್ಳೊಳ್ಳಿ, ಡೀನ್ ಡಾ.ರಾಮಚಂದ್ರ ನಾಯಕ, ಸಂಶೋಧನಾ ನಿರ್ದೇಶಕರಾದ ಡಾ.ಎಂ.ಎಸ್.ಲೋಕೇಶ, ಡಾ.ಆನಂದ, ಡಾ.ಸತೀಶ ಪಾಟಿ, ಡಾಶಶಿಕುಮಾರ, ಡಾ.ಎಚ್.ಎಂ.ಪಲ್ಲವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.