ಬಾಗಲಕೋಟೆ: ಪ್ರಧಾನ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಸೋತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಈ ಬಾರಿ ಅವರು ಬಾಗಲಕೋಟೆ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಬೀಳಗಿಯಲ್ಲಿ ಶನಿವಾರ ಆಯೋಜಿಸಿದ್ದ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಸುಳ್ಳು ಭರವಸೆಗಳ ಮೂಲಕ ಮೋದಿ ಎರಡು ಬಾರಿ ಅಧಿಕಾರ ಹಿಡಿದಿದ್ದಾರೆ. ಆದರೆ ಈ ಬಾರಿ ಅವರ ಹುಸಿ ಭರವಸೆಗಳನ್ನು ಮತದಾರರು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಟೀಕಿಸಿದರು.
ಕಾಂಗ್ರಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಿದೆ. ಆದರೆ ಬಿಜೆಪಿ ಆರು ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದ್ದು, ಈ ಸಮಾಜಗಳಿಗೆ ಟಿಕೆಟ್ ನೀಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ಎಷ್ಟೇ ಮಾತನಾಡಿದರೂ ಕೇವಲ ಒಬ್ಬ ಮಹಿಳೆಗೆ ಮಾತ್ರ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ಆರು ಮಹಿಳೆಯರಿಗೆ ಸ್ಪರ್ಧೆಯ ಅವಕಾಶ ಕಲ್ಪಿಸಿದೆ . ಯುವಶಕ್ತಿಗೆ ಹೆಚ್ಚು ಅವಕಾಶ ನೀಡಿದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಮಾತನಾಡಿ, ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ಹಾಗು ಪ್ರಜಾಪ್ರಭುತ್ವ ರಕ್ಷಣೆ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು.
ಸಂವಿಧಾನಕ್ಕೆ ಧಕ್ಕೆಯಾದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಅತ್ಯಾಚಾರ, ಅನಾಚಾರ,ಅನೀತಿ ವಿಜೃಂಭಿಸುವ ಅಪಾಯವಿದೆ. ಇಂತಹ ಸ್ಥಿತಿಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮಾತನಾಡಿ, ಗೋ ಪ್ರೀತಿ ತೋರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಗೋಮಾಂಸ ರಫ್ತು ಮೇಲೆ ಏಕೆ ನಿಷೇಧ ಹೇರುತ್ತಿಲ್ಲ? ಕಸಾಯಿಖಾನೆಗಳನ್ನು ಏಕೆ ಬಂದ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾತೆತ್ತಿದ್ದರೆ ರಾಮ ಎಂದು ಹೇಳುತ್ತಾರೆ. ನಮಗೂ ಕೂಡ ಶ್ರೀರಾಮನ ಮೇಲೆ ಭಕ್ತಿ ಇದೆ. ಮತದಾರರನ್ನು ಧಾರ್ಮಿಕವಾಗಿ ಬ್ಲ್ಯಾಕ್ಮೇಲ್ ಮಾಡುವ ಬದಲಿಗೆ 10 ವರ್ಷಗಳ ಆಡಳಿತದಲ್ಲಿ ಮಾಡಿರುವ ಕೆಲಸದ ಆಧಾರದ ಮೇಲೆ ಮತ ಕೇಳಲಿ ಎಂದು ಸವಾಲು ಹಾಕಿದರು.
ಸಮೀಕ್ಷೆಯಲ್ಲಿ ಸ್ಪಷ್ಟ ; ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ 200 ಸ್ಥಾನಗಳನ್ನು ಗಳಿಸುವುದು ಕಷ್ಟ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಈ ಬಾರಿ 400 ಮೇಲೆ ಎಂದು ಹೇಳುತ್ತಿದ್ದಾರೆ. ಆದರೆ 200 ಸ್ಥಾನ ಗಳಿಸುವುದು ಕಷ್ಟ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಕರ್ನಾಟಕದಲ್ಲಿ 25 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ವಾಸ್ತವವಾಗಿ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ಬಿಜೆಪಿ ಗೆದ್ದಿರುವ ಎಲ್ಲ ಕಡೆಯೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಎಂದೋ ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾಗಬೇಕಿತ್ತು. ಅಂತಾರಾಜ್ಯ ವ್ಯಾಜ್ಯ ಇತ್ಯರ್ಥಪಡಿಸಿ ಕೃಷ್ಣೆಯ ನಮ್ಮ ಹಕ್ಕಿನ ಪೂರ್ಣ ಪ್ರಮಾಣದ ನೀರನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಸಂತ್ರಸ್ತರಿಗೆ ನ್ಯಾಯ ; ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ನನ್ನ ಗುರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಬಾಗಲಕೋಟೆಯಲ್ಲಿ ಬದಲಾವಣೆಯನ್ನು ತರಬೇಕು ಎನ್ನುವುದು ನನ್ನ ಕನಸು. ಜಿಲ್ಲೆಯ ಯುವಕರಿಗೆ ಉದ್ಯೋಗ ಒದಗಿಸಲು ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದ ಕನಸು ಹೊತ್ತಿದ್ದೇನೆ. ಈ ಕನಸು ನನಸು ಮಾಡಲು ನಿಮ್ಮ ಆಶೀರ್ವಾದ ಬೇಕು ಎಂದರು.
ಇದು ಪಿ.ಸಿ. ಗದ್ದಿಗೌಡರ್ ಮತ್ತು ಸಂಯುಕ್ತ ನಡುವಿನ ಚುನಾವಣೆ ಅಲ್ಲ. ಈ ಚುನಾವಣೆಯಲ್ಲಿ ದೇಶದ ಭವಿಷ್ಯ ಅಡಗಿದೆ. ದೇಶಕ್ಕಾಗಿ ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ 20 ವರ್ಷ ಬೀಸಿದ ಗಾಳಿ ಈ ವರ್ಷ ಇಲ್ಲ. ಆ ಗಾಳಿ ಈ ಬಾರಿ ಮಾಯವಾಗಿದೆ. ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಗೆಲುವು ನಿಶ್ಚಿತ.
ಶಿವಾನಂದ ಎಸ್. ಪಾಟೀಲ
ಸಚಿವ
ಭ್ರಷ್ಟರನ್ನು ಜೈಲಿಗೆ ಹಾಕುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪದೇಪದೆ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಅವರ ಮಾತು ನಿಜವಾಗಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಸಚಿವರು ಬ್ರಷ್ಟಾಚಾರ ಎಸಗಿದ್ದಾರೆ ಎಂಬುದು ದೇಶಕ್ಕೇ ಗೊತ್ತಿದ್ದು, ಅವರನ್ನು ಮೊದಲು ಜೈಲಿಗೆ ಹಾಕಲಿ.
ಅಜಯಕುಮಾರ ಸರನಾಯಕ
ಕೆಪಿಸಿಸಿ ಉಪಾಧ್ಯಕ್ಷ
ಬಿಜೆಪಿ ಯುವಕರ ಕೈಗೆ ಬಡಿಗೆ ಕೊಡುವ ಮೂಲಕ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರ ಬಗ್ಗೆ ನೈಜ ಕಳಕಳಿ ಇದ್ದರೆ ಅವರ ಕೈಗೆ ಬಡಿಗೆ ಕೊಡುವ ಬದಲಿಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕಿತ್ತು.
ಆರ್.ಬಿ. ತಿಮ್ಮಾಪುರ
ಸಚಿವ