ಬಾಗಲಕೋಟೆ ; ಉತ್ಸಾಹ ಜೀವನಕ್ಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದಿಲು ಕ್ರೀಡೆಗಳು ಅವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೇರಳೆ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಎಲ್ಲ ವೃಂದದ ಸಂಘಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿದಿನ ಒಂದು ಗಂಟೆಯಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಉತ್ಸಾಹದಿಂದಿರಲು ಸಾಧ್ಯ. ಇಂದು ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಹಿಂದೆ ಆಟವಾಡಲು ಹೋದರೆ ಸಂಜೆಯವರೆಗೆ ಮನೆಗೆ ಬರುತ್ತಿರಲಿಲ್ಲ. ಆದರೆ ಇಂದು ಮೊಬೈಲ್ ಪ್ರಭಾವಕ್ಕೆ ಒಳಗಾಗಿ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಅವರನ್ನು ನಾವೆ ಆಟವಾಡಲು ಕಳುಹಿಸುವ ಪ್ರಸಂಗ ಒದಗಿ ಬಂದಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ್ ಮಾತನಾಡಿ ಕ್ರೀಡೆಗಳು ನಮ್ಮ ಬದುಕಿನ ಒಂದು ಭಾಗವಾಗಬೇಕು. ಇಡೀ ದಿನ ನಾವು ಚಟುವಟಿಕೆಗಳಿಂದ ಇರಬೇಕಾದರೆ, ಸ್ವಲ್ಪ ಸಮಯದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಪ್ರಾರಂಭದಲ್ಲಿ ಬೆಳಗಿನ ಜಾವ ವಿಹಾರಕ್ಕೆ ಮತ್ತು ಕ್ರೀಡೆಗಳಿಗೆ ಮುಜುಗರವಾಗುತ್ತಿತ್ತು. ಇಲ್ಲಿಯ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶರ ಬೆಳಗಿನ ಚಟುವಟಿಕೆಗಳನ್ನು ಕಂಡು ರೂಡಿಸಿಕೊಂಡಿದ್ದೇನೆ ಎಂದರು.
ಈ ವರ್ಷ ಇಲಾಖೆಯಿಂದ ಹಮ್ಮಿಕೊಂಡ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡಲಾಗಿದೆ. ಕ್ರೀಡೆಯಲ್ಲಿ ವಿಜೇತರಾಗುವುದು ಮುಖ್ಯವಲ್ಲ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವುದು ಮುಖ್ಯ. ಎಲ್ಲ ತಾಲೂಕಿನಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವುದು ಸಂತೋಷವಾಗಿದೆ. ಆರೋಗ್ಯ ತಪಾಸನಾ ಶಿಬಿರವನ್ನು ಸಹ ಹಮ್ಮಿಕೊಂಡಿದ್ದು, ಇದರ ಸದುಪಯೋಗ ತಾವೆಲ್ಲರೂ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ರಾಜ್ಯ ಸರಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಕ್ರೀಡಾ ಧ್ವಜವನ್ನು ನೆರವೇರಿಸಿ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಬಲೂನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಯಿತು. ನಂತರ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಗಳಿಗೆ ಚಾಲನೆ ನೀಡಲಾಯಿತು.